ಕನ್ನಡಪ್ರಭ ವಾರ್ತೆ ಸಿರಿಗೆರೆ
ಕೆರೆಗಳು ಕೋಡಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ನಾಗರೀಕರು ಬೆಳಿಗ್ಗೆಯೇ ಕೆರೆ ಕೋಡಿಗಳ ಸಮೀಪ ದೌಡಾಯಿಸಿ ಹರಿಯುವ ನೀರಿನಲ್ಲಿ ನಿಂತು ಸಂಭ್ರಮಪಟ್ಟರು. ಸಿರಿಗೆರೆಯ ಪಶ್ಚಿಮಕ್ಕಿರುವ ಹೊಸ ಕೆರೆ, ದಕ್ಷಿಣಕ್ಕಿರುವ ಗೌಡನಕೆರೆ ಹಾಗೂ ಉತ್ತರಕ್ಕಿರುವ ಬುಕ್ಕರಾಯನ ಕೆರೆಗಳು ತುಂಬಿರುವುದರಿಂದ ಸಿರಿಗೆರೆ ಈಗ ದ್ವೀಪದಂತಾಗಿದೆ.
ಸಮೀಪದ ಕೊಡಗವಳ್ಳಿ ಗ್ರಾಮದ ಕೆರೆಯೂ ಸಹ ನಿನ್ನೆ ರಾತ್ರಿಯ ಮಳೆಗೆ ತುಂಬಿದೆ. ಕೋಡಿಯ ಸಮೀಪ ಕೊರಕಲು ಉಂಟಾಗಿದ್ದು, ನೀರು ಕೋಡಿಯ ಕೆಳಗಿನಿಂದ ಹರಿದುಹೋಗುತ್ತಿದೆ. ಅದನ್ನು ಸಂಬಂಧಿಸಿದವರಿಂದ ದುರಸ್ಥಿ ಮಾಡಿಸಬೇಕೆಂದು ಗ್ರಾಮಸ್ಥರು ತರಳಬಾಳು ಶ್ರೀಗಳಲ್ಲಿ ಮನವಿ ಮಾಡಿದ್ದಾರೆ.ಪಳಿಕೆಹಳ್ಳಿ, ಸೀಗೆಹಳ್ಳಿ, ಅಳಗವಾಡಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಲ್ಲಿಂದ ಹರಿದು ಬಂದ ನೀರು ಶಾಂತಿವನದ ಮಿನಿ ಜಲಾಶಯ ತಲುಪಿದೆ. ಶಾಂತಿವನದಲ್ಲಿ ನೀರು ಕೋಡಿ ಬೀಳುತ್ತಿದ್ದಂತೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಯುವಕರ ಜತೆಗೆ ನೀರಿಗಿಳಿದು ಸಂತಸಪಟ್ಟರು.ಜಗಳೂರು ಏತ ನೀರಾವರಿ ಯೋಜನೆಗೆ ಸೇರುವ ಜಗಳೂರು ಪಟ್ಟಣದ ಕೆರೆಯೂ ಕೂಡ ರಾತ್ರಿ ಕೋಡಿ ಬಿದ್ದಿದೆ. ಆ ಭಾಗದ ಕೆರೆಗಳು ತುಂಬಿರುವುದರಿಂದ ಅವುಗಳ ವೀಕ್ಷಣೆ ಮಾಡಲು ಶ್ರೀಗಳು ಭಾನುವಾರ ಬೆಳಿಗ್ಗೆ ತೆರಳಲಿರುವರು.