ಮಲೆನಾಡಿಗೆ ಸರ್‌ಎಂವಿ ಕೊಡುಗೆ ಅಪಾರ

KannadaprabhaNewsNetwork |  
Published : Sep 16, 2025, 01:00 AM IST
ಭದ್ರಾವತಿಯಲ್ಲಿ  ಸೋಮವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮುಖಂಡರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಮಲೆನಾಡಿಗೆ ಭಾರತ ರತ್ನ, ದೇಶದ ಅಪ್ರತಿಮ ಅಭಿಯಂತರ ಸರ್ ಎಂ.ವಿಶ್ವೇಶ್ವರಯ್ಯಯರವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭದ್ರಾವತಿ: ಮಲೆನಾಡಿಗೆ ಭಾರತ ರತ್ನ, ದೇಶದ ಅಪ್ರತಿಮ ಅಭಿಯಂತರ ಸರ್ ಎಂ.ವಿಶ್ವೇಶ್ವರಯ್ಯಯರವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸೋಮವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯರವರ ೧೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯರವರು ಜಿಲ್ಲೆಯಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಸ್ಥಾಪನೆ ಜೊತೆಗೆ ಲಿಂಗನಮಕ್ಕಿ ಜಲಾಶಯ, ಜೋಗ ಜಲಪಾತ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ಮಲೆನಾಡಿನ ಜನರ ಅನ್ನದಾತರಾಗಿದ್ದಾರೆ ಎಂದು ಬಣ್ಣಿಸಿದರು. ನಿವೃತ್ತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಡಲು ಬದ್ಧನಾಗಿದ್ದೇನೆ. ಈಗಾಗಲೇ ಹಲವು ಸಮಸ್ಯೆಗಳು ಬಗೆಹರಿದಿವೆ. ಮನೆ ಬಾಡಿಗೆ ಹೆಚ್ಚಳ ಕಡಿಮೆಗೊಳಿಸುವ ಸಂಬಂಧ ಉಕ್ಕು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಹೊಸದಾಗಿ ಮರುನಿರ್ಮಾಣ ಮಾಡುವ ಕಾರ್ಯ ಮುಂದಿನ ಒಂದು ತಿಂಗಳಲ್ಲಿ ಯಶಸ್ಸು ಕಾಣಲಿದೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರು ನೀಡಿರುವ ಭರವಸೆ ಇನ್ನೊಂದು ತಿಂಗಳಲ್ಲಿ ಯಶಸ್ಸು ಕಾಣುವ ಲಕ್ಷಣಗಳು ಕಂಡು ಬರುತ್ತಿವೆ. ಕೇಂದ್ರ ಸರ್ಕಾರ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ (ವೈಜಾಗ್ ಸ್ಟೀಲ್ ಪ್ಲಾಂಟ್) ಪುನಶ್ಚೇತನಗೊಳಿಸಿದಂತೆ ಈ ಕಾರ್ಖಾನೆಗೂ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಖಾನೆಯ ಬ್ಲಾಸ್ಟ್ ಫರ್‍ನೇಸ್ ಘಟಕ ಉಳಿಸಿಕೊಂಡು ಮರುನಿರ್ಮಾಣ ಮಾಡುವ ಕಾರ್ಯ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿಯವರ ಶ್ರಮ ಹೆಚ್ಚಿನದ್ದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ನಿವೃತ್ತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರು ನೀಡಿರುವ ಭರವಸೆಯಂತೆ ಕೆಲವು ದಿನ ಕಾದು ನೋಡೋಣ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಮ್ಮೊಂದಿಗೆ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದರು.ಮೆಸ್ಕಾಂ ನಿವೃತ್ತ ಅಭಿಯಂತರ ಜೆ.ಶಿವಪ್ರಸಾದ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಕುರಿತು ಉಪನ್ಯಾಸ ನೀಡಿದರು. ಕಲ್ಯಾಣ ಕೇಂದ್ರದ ಅಧ್ಯಕ್ಷ ಅಧ್ಯಕ್ಷ ಬಿ.ಜಿ.ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕೇಂದ್ರದ ಉಪಾಧ್ಯಕ್ಷ ಎಸ್.ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಮಂಜುನಾಥ್, ಖಜಾಂಚಿ ಎಲ್.ಬಸವರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಹಾ.ರಾಮಪ್ಪ, ಎಸ್.ಎಸ್.ಭೈರಪ್ಪ, ಕೆಂಪಯ್ಯ, ಜಿ.ಶಂಕರ್, ಬಿ.ಕೆ.ರವೀಂದ್ರ ರೆಡ್ಡಿ, ಎಂ.ನಾಗರಾಜ, ಲಾಜರ್ ಮತ್ತು ಗಜೇಂದ್ರ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ.ರಾಘವೇಂದ್ರ, ಮುಖಂಡರಾದ ಜಿ.ಧರ್ಮಪ್ರಸಾದ್, ಕೆ.ಎಚ್.ತೀರ್ಥಯ್ಯ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ