ಶಿರಸಿ: ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರದಿಂದ ವಿಧ್ಯುಕ್ತವಾಗಿ ಪ್ರಾರಂಭಗೊಂಡಿದ್ದು, ಬುಧವಾರ ದೇವಾಲಯದಿಂದ ರಥಾರೋಹಣದ ಮೂಲಕ ಬಂದ ಮಾರಿಕಾಂಬೆ ನಗರದ ಬಿಡ್ಕಿಬೈಲ್‌ನ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದಾಳೆ.
ಬುಧವಾರ ಬೆಳಗ್ಗೆ ೭.೨೭ರ ಸುಮಾರಿಗೆ ಶಕ್ತಿದೇವತೆ ಮಾರಿಕಾಂಬೆಯು ರಥವನ್ನೇರಿದ್ದು, ೮.೫೯ಕ್ಕೆ ದೇವಾಲಯದ ಆವರಣದಿಂದ ರಥ ಹೊರಟು, ಬಿಡ್ಕಿಬೈಲ್‌ಗೆ ೧೧.೩೦ಕ್ಕೆ ಬಂದಿದೆ. ನಂತರ ಮುಹೂರ್ತದ ಸಮಯಕ್ಕೆ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಸುಡು ಬಿಸಿಲನ್ನು ಲೆಕ್ಕಿಸದೇ ಅಮ್ಮನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ರಥೋತ್ಸವದುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಮಾರಿಕಾಂಬೆ ಜಾತ್ರಾ ಗದ್ದುಗೆಗೆ ಆಸೀನಳಾಗುವವರೆಗೂ ಶಾಂತಯುತವಾಗಿ ಪಾಲ್ಗೊಂಡು ಭಕ್ತಿ- ಭಾವದಲ್ಲಿ ಮಿಂದೆದ್ದರು.
ಹರಕೆ ತೀರಿಸಿದ ಭಕ್ತರು: ಅಮ್ಮನಿಗೆ ಉಘೇ ಉಘೇ... ಎಂದು ರಥೋತ್ಸವದಲ್ಲಿ ಭಾಗಿಯಾದ ಭಕ್ತರು, ತಾವು ತಂದ ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುತ್ತಿರುವ ದೃಶ್ಯ ಜಾತ್ರಾ ಮಂಟಪದವರೆಗೂ ಕಂಡುಬಂತು. ಅಲ್ಲದೇ ಮಾರಿಕಾಂಬೆಯನ್ನು ಹೊತ್ತು ರಥ ಬರುವಾಗ ಜನರು ಹರಕೆಯ ಕೋಳಿಯನ್ನು ಬಿಡುತ್ತಿದ್ದದ್ದು, ಅದನ್ನು ಹಿಡಿಯಲು ಉಳಿದವರು ಮುನ್ನುಗ್ಗುತ್ತಿದ್ದ ದೃಶ್ಯ ಕಂಡುಬಂದಿತು.ಅಸಂಖ್ಯಾತ ಭಕ್ತಜನರು ಭಾಗಿ: ಮಾರಿಕಾಂಬೆಯ ಭಕ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಎಲ್ಲ ಕಡೆಗಳಿಂದಲೂ ಭಕ್ತರು ಆಗಮಿಸಿ ನಾಡಿನ ಶಕ್ತಿದೇವತೆಯಾದ ಶಿರಸಿಯ ಮಾರಿಕಾಂಬೆಯ ಕೃಪೆಗೆ ಪಾತ್ರರಾದರು. ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ಬ್ಯಾಡಗಿ, ಹುಬ್ಬಳ್ಳಿ, ಧಾರವಾಡ, ಗದಗ, ವಿಜಯಪುರ, ರಾಯಚೂರು, ಬಾಗಲಕೋಟೆ, ಅಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲೆಡೆಯಿಂದ ಮಾರಿಕಾಂಬೆಯ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿ-ವಿಧಾನಗಳು ಮುಗಿದ ನಂತರ ಶಿರಸಿಯ ಸಿರಿದೇವಿ ಮಾರಿಯಮ್ಮ ಜಾತ್ರಾ ಗದ್ದುಗೆಯಲ್ಲಿ ೧.೧೦ ಸಮಯಕ್ಕೆ ವಿರಾಜಮಾನಳಾಗಿದಳು.
ಸೆಲ್ಫಿಗೆ ಮುಗಿಬಿದ್ದ ಜನ: ತಾಯಿ ಮಾರಿಕಾಂಬೆಯನ್ನು ಅತ್ಯಂತ ಭಕ್ತಿಯಿಂದ ರಥದಲ್ಲಿ ಕರೆತರುತ್ತಿರುವ ಭಕ್ತರು ಒಂದೆಡೆಯಾದಲ್ಲಿ ತಮ್ಮ ಇಷ್ಟದೇವತೆಯು ರಥದಲ್ಲಿ ಆಸೀನಳಾಗಿದ್ದ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ ಇನ್ನೊಂದೆಡೆಯಾಗಿದ್ದರು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಶಿರಸಿ ಜಾತ್ರೆಯ ಹವಾ ಇರುವ ಕಾರಣ ಯುವ ಜನಾಂಗದವರು ಸೆಲ್ಫಿ ತೆಗೆದುಕೊಳ್ಳಲು ತಾ ಮುಂದು ತಾ ಮುಂದು ಎಂದು ಮುಗಿ ಬಿದ್ದದ್ದು ಕಂಡುಬಂದಿತು.
ಜಾತ್ರೆ ಹಿನ್ನೆಲೆ ಬುಧವಾರ ಬೆಳಗ್ಗೆ ದೇವಾಲಯದ ಆವರಣದಿಂದ ಆರಂಭವಾದ ಸುಮಾರು ೯೦೦ ಮೀಟರ್ ರಥೋತ್ಸವವು ೨ ತಾಸು ೨೦ ನಿಮಿಷಗಳ ಕಾಲ ಭಕ್ತರ ಜಯಘೋಷದೊಂದಿಗೆ ನಡೆಯಿತು. ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿ, ತಮ್ಮ ಹರಕೆಯನ್ನು ತೀರಿಸಿದರು.ಜನಸಾಮಾನ್ಯರಂತೆ ಶಾಸಕ ಭೀಮಣ್ಣ ಭಾಗಿ
ನೃತ್ಯ ಕಲಾತಂಡಗಳು