ಬೆಂಗಳೂರು : ಸಿಬಿಐ ತನಿಖೆ ನಡೆಸದೇ ವಾಪಸ್ ಮಾಡಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯ 6 ಅದಿರು ಸಾಗಾಣಿಕೆ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರವೇ ತನಿಖೆ ನಡೆಸಲು ನಿರ್ಧರಿಸುದ್ದು, ರಾಜ್ಯ ಸಚಿವ ಸಂಪುಟ ಗುರುವಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆಗೆ ಅನುಮೋದನೆ ನೀಡಿದೆ.
ರಾಜ್ಯದಲ್ಲಿ 2006 ರಿಂದ 2010ರ ನಡುವಿನ ಅಕ್ರಮ ಅದಿರು ಸಾಗಾಣಿಕೆಯ 9 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಈ ಪೈಕಿ 6 ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸದೆ ವಾಪಸು ಕಳುಹಿಸಿತ್ತು. ಈ 6 ಪ್ರಕರಣಗಳ ತನಿಖೆಗೆ ಈಗ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಲು ತೀರ್ಮಾನಿಸಿದೆ.
ತನ್ಮೂಲಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವಧಿಯ ಸರ್ಕಾರಗಳಲ್ಲಿ ನಡೆದಿದ್ದ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಕೆದಕಲು ಸರ್ಕಾರ ಮುಂದಾಗಿದೆ.
ಲೋಕಾಯುಕ್ತ ವರದಿ ಆಧರಿಸಿ 2014-15ರಲ್ಲಿ 9 ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಾಣಿಕೆ ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಈ ವೇಳೆ 6 ಪ್ರಕರಣಗಳನ್ನು ವಿವಿಧ ಕಾರಣಗಳನ್ನು ನೀಡಿ ಹಲವು ವರ್ಷಗಳ ಬಳಿಕ ತನಿಖೆ ನಡೆಸದೆ ಸಿಬಿಐ ವಾಪಸು ಕಳಿಸಿದೆ. ಈ ಪ್ರಕರಣಗಳ ಸಂಬಂಧ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ನಿರ್ಣಯಿಸಿದ್ದು, 6 ಪ್ರಕರಣಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆ ಮುಂದೆ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಂಪುಟ ಸಭೆ ನಿರ್ದೇಶನ ನೀಡಿದೆ.
6 ಪ್ರಕರಣ ಇವು:
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಚಿವ ಎಚ್.ಕೆ. ಪಾಟೀಲ್, ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಣೆ ಪ್ರಕರಣಗಳ ತನಿಖೆಗೆ ಸಿಬಿಐಗೆ ಕಳುಹಿಸಲಾಗಿತ್ತು.
ಈ ಪೈಕಿ 6 ಪ್ರಕರಣಗಳನ್ನು ಸಿಬಿಐ ಹಿಂದಕ್ಕೆ ಕಳುಹಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ನವ ಮಂಗಳೂರು ಬಂದರು, ಕಾರವಾರ ಬಂದರು, ಗೋವಾದ ಮರ್ಮಗೋವಾ ಬಂದರು, ಪಣಜಿ ಬಂದರು, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ ಬಂದರು ಮೂಲಕ ಸಾಗಣೆ ಮಾಡಿರುವ ಪ್ರಕರಣಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ತನಿಖೆಗೆ ನಿರ್ಧರಿಸಿದೆ ಎಂದರು.
ಸಿಬಿಐ ನಿರ್ಲಕ್ಷಿಸಿತ್ತು- ಅಧಿಕಾರಿ ಹೇಳಿಕೆ:
2006ರಿಂದ 2010ರ ಅವಧಿಯಲ್ಲಿ ನವ ಮಂಗಳೂರು ಬಂದರು ಮೂಲಕ 66.51 ಲಕ್ಷ ಟನ್ ಕಬ್ಬಿಣದ ಅದಿರು ರಫ್ತಾಗಿದೆ. ಈ ಬಗ್ಗೆ 2014ರಲ್ಲಿ ಸಿಬಿಐ ಹಾಗೂ ಎಸಿಬಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಒಟ್ಟು 76 ಕಂಪೆನಿ ಹಾಗೂ ವ್ಯಕ್ತಿಗಳು 2.85 ಕೋಟಿ ಟನ್ ಪ್ರಮಾಣದ ಕಬ್ಬಿಣದ ಅದಿರು ರಫ್ತು ಮಾಡಿದ್ದಾರೆ. ಈ ಪೈಕಿ 40 ರಫ್ತುದಾರರ 57.53 ಲಕ್ಷ ಟನ್ ಸಾಗಣೆ ಬಗ್ಗೆ ದಾಖಲೆಗಳು ಲಭ್ಯವಾಗಿಲ್ಲ. ಇನ್ನು ಕಾರವಾರ ಬಂದರಿನಲ್ಲಿ 20.27 ಲಕ್ಷ ಟನ್ ರುಜುವಾತುಪಡಿಸದ ಅದಿರು ಸಾಗಾಣ ಎಂದು ಸಾಬೀತಾಗಿದೆ. ಎಲ್ಲಾ ಪ್ರಕರಣಗಳನ್ನು ಸಿಬಿಐ ನಿರ್ಲಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
10 ಗಣಿ ಗುತ್ತಿಗೆದಾರ ಕಂಪೆನಿಗಳ ವಿರುದ್ಧ ಎಸ್‌ಐಟಿ ತನಿಖೆ
ಬೆಂಗಳೂರು: ರಾಜ್ಯದಲ್ಲಿ ಗಣಿಗಾರಿಕೆಗೆ ಪ್ರವರ್ಗ 10-ಸಿ ಅಡಿ ಗಣಿ ಪರವಾನಗಿ ಪಡೆದು ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೆಸರಿನ ಕಂಪೆನಿ ಸೇರಿದಂತೆ 10 ಕಂಪೆನಿ ಹಾಗೂ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ ಲೋಕಾಯುಕ್ತ ಎಸ್‌ಐಟಿ ತನಿಖೆ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ.
ಮೆ. ಅಲ್ಲಂ ವೀರಭದ್ರಪ್ಪ ಎಂಬ ಕಂಪೆನಿಯನ್ನು ಅಲ್ಲಂ ವೀರಭದ್ರಪ್ಪ ಅವರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅವರಿಂದ ಖರೀದಿ ಮಾಡಿರುವ ಹೊಸ ಮಾಲೀಕರು ಅದೇ ಹೆಸರಿನಲ್ಲಿ ಕಂಪೆನಿಯ ಹೆಸರು ಮುಂದುವರೆಸಿದ್ದು, ತನಿಖೆಯನ್ನು ಹೊಸ ಕಂಪೆನಿ ಮಾಲೀಕರು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ 10 ಕಂಪೆನಿಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ಅರಣ್ಯ ಸಂರಕ್ಷಣೆ ನಿಯಮ ಉಲ್ಲಂಘನೆ ಮಾಡಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಿರುವ ಎಸ್‌ಐಟಿಗೆ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಹತ್ತು ಕಂಪೆನಿ/ವ್ಯಕ್ತಿಗಳು ಯಾರು?:
ಮೈಸೂರು ಮ್ಯಾಂಗನೀಸ್ ಕಂಪನಿ, ಎಂ.ದಶರಥ ರಾಮಿ ರೆಡ್ಡಿ, ಮೆ: ಅಲ್ಲಂ ವೀರಭದ್ರಪ್ಪ, ಕರ್ನಾಟಕ ಲಿಂಪೊ, ಅಂಜನಾ ಮಿನರಲ್ಸ್, ರಾಜೀಯ ಖಾನುಂ, ಮಿಲನ ಮಿನರಲ್ಸ್ (ಮಹಾಲಕ್ಷಿ & ಕಂ), ಎಂ.ಶ್ರೀನಿವಾಸುಲು, ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ) ಮತ್ತು ಜಿ.ರಾಯಶೇಖರ್.