ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತ ಮುಖಂಡ ಸಿಂಧಘಟ್ಟ ಮುದ್ದುಕುಮಾರ್ ನೇತೃತ್ವದಲ್ಲಿ ಕೆನರಾ ಬ್ಯಾಂಕ್ ಶಾಖಾ ಕಚೇರಿಗೆ ಆಗಮಿಸಿದ ರೈತ ಮುಖಂಡರು ಧರಣಿ ಆರಂಭಿಸಿ, ತಾಲೂಕಿನ ಮಡುವಿನಕೋಡಿ ಗ್ರಾಮದ ರಂಗಸ್ವಾಮಿ ಪುತ್ರಿ ಎಂ.ಆರ್.ಲಿಖಿತಾ ಕಳೆದ 8 ವರ್ಷಗಳ ಹಿಂದೆ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಿಂದ 3.20 ಲಕ್ಷ ರು. ಶಿಕ್ಷಣ ಸಾಲ ಪಡೆದಿದ್ದರು ಎಂದರು.
ನಿರುದ್ಯೋಗ ಸಮಸ್ಯೆಯಿಂದ ಸಕಾಲಕ್ಕೆ ಸಾಲ ತೀರಿಸಲಾಗಿರಲಿಲ್ಲ. ಈ ಬಗ್ಗೆ ಕೆನರಾ ಬ್ಯಾಂಕ್ ಸಾಲ ತೀರುವಳಿ ಮಾಡದ ಎಂ.ಆರ್. ಲಿಖಿತಾ ಅವರಿಗೆ ನ್ಯಾಯಾಲಯದ ಮೂಲಕ ನೋಟಿಸ್ ಕಳುಹಿಸಿತ್ತು. ಆನಂತರದ ಬೆಳವಣಿಗೆಯಲ್ಲಿ ಲಿಖಿತಾ ಬ್ಯಾಂಕ್ ಮ್ಯಾನೇಜರ್ ಸೂಚನೆ ಮೇರೆಗೆ 1.80 ಲಕ್ಷ ರು. ಕಟ್ಟಿ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆ ಮೂಲಕ 2023ರ ಮಾರ್ಚ್ 31ರಂದು ಸಾಲ ತೀರುವಳಿ ಮಾಡಿದ್ದಾರೆ ಎಂದರು.ಸಾಲ ತೀರುವಳಿ ಮಾಡಿ ಒಂದು ವರ್ಷ ಕಳೆದಿದ್ದರೂ ಬ್ಯಾಂಕ್ ಇದುವರೆಗೂ ತೀರುವಳಿ ಪತ್ರ ನೀಡಿಲ್ಲ. ಈ ಬಗ್ಗೆ ಕೇಳಿದರೆ ಬ್ಯಾಂಕ್‌ನ ವ್ಯವಸ್ಥಾಪಕರು ಸಲ್ಲದ ಸಬೂಬು ಹೇಳಿ ಇಂದು ನಾಳೆ ಎನ್ನುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಮುದ್ದುಕುಮಾರ್ ಮಾತನಾಡಿ, ನಾವು ಏಕಾಏಕಿ ಧರಣಿಗೆ ಕುಳಿತಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಜೂನ್ 3 ರಂದು ಧರಣಿ ನಡೆಸುವುದಾಗಿ ಕಳೆದ 10 ದಿನಗಳ ಹಿಂದೆಯೇ ಬ್ಯಾಂಕ್‌ಗೆ ಲಿಖಿತ ಸೂಚನೆ ನೀಡಿದ್ದೇವೆ ಎಂದರು.
ತೀರುವಳಿ ಪ್ರಮಾಣ ಪತ್ರ ನೀಡಲು ಮೂರು ದಿನಗಳ ಕಾಲಾವಕಾಶ ಕೇಳಿದ್ದೇವೆ. ಈ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದು ಸಮಸ್ಯೆ ಬಗೆಹರಿಸಲು ಬ್ಯಾಂಕ್ ಸಿದ್ದವಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.