ರಸ್ತೆ ದುರಸ್ತಿಗೆ ಆಗ್ರಹಿಸಿ ಶಿಗ್ಲಿಯಲ್ಲಿ ಧರಣಿ ಸತ್ಯಾಗ್ರಹ

KannadaprabhaNewsNetwork |  
Published : Oct 06, 2026, 02:15 AM IST
ಪೊಟೋ-ಸಮೀಪದ ಶಿಗ್ಲಿಯ ಬಸ್ ನಿಲ್ದಾಣದ ಹತ್ತಿರ ರಸ್ತೆ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಧರಣಿ ಸ್ಥಳಕ್ಕೆ ತಹಶೀಲ್ದಾರ ಧನಂಜಯ ಎಂ, ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದರು.  | Kannada Prabha

ಸಾರಾಂಶ

ಶಿಗ್ಲಿ ಗ್ರಾಮದ ರಸ್ತೆಗಳು ಹಾಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಗ್ರಾಮದ ಹಳೆ ಬಸ್ ನಿಲ್ದಾಣದ ಎದುರು ಗ್ರಾಮಸ್ಥರು ಸೋಮವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಶಿಗ್ಲಿ ಗ್ರಾಮದ ರಸ್ತೆಗಳು ಹಾಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಗ್ರಾಮದ ಹಳೆ ಬಸ್ ನಿಲ್ದಾಣದ ಎದುರು ಗ್ರಾಮಸ್ಥರು ಸೋಮವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.

ನೇತೃತ್ವ ವಹಿಸಿದ್ದ ಆದೇಶ ಹುಲಗೂರ ಮಾತನಾಡಿ, ಶಿಗ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹಾಳಾಗಿವೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ರಸ್ತೆಗಳು ದುರಸ್ತಿ ಮಾಡಿಲ್ಲ. ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳಿಗೆ ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಇಲ್ಲವಾಗಿದೆ. ಶಿಗ್ಲಿ ಗ್ರಾಮದಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ತಗ್ಗು-ಗುಂಡಿಗಳು ಬೈಕ್ ಚಾಲಕರನ್ನು ಬಲಿ ಪಡೆಯುವ ಹಂತಕ್ಕೆ ಹೋಗಿವೆ. ಹಲವರು ಬಿದ್ದು ಕೈಕಾಲು ಮುರಿದು ಕೊಂಡು ಉದಾಹರಣೆಗಳು ಸಾಕಷ್ಟಿವೆ. ಇನ್ನೊಂದು ತಿಂಗಳಲ್ಲಿ ರಸ್ತೆ ಸುಧಾರಣೆಗೆ ಮುಂದಾಗದಿದ್ದಲ್ಲಿ ರಸ್ತೆ ತಡೆ ನಡೆಸಿ, ಶಿಗ್ಲಿ ಗ್ರಾಮ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಈ ವೇಳೆ ಸೋಮಣ್ಣ ಡಾಣಗಲ್ಲ ಮಾತನಾಡಿ, ಶಿಗ್ಲಿ ಗ್ರಾಮವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದ ಗ್ರಾಮವು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ 2-3 ದಶಕಗಳಿಂದ ಈ ಭಾಗದಲ್ಲಿ ರಸ್ತೆಗಳು ಸುಧಾರಣೆಯಾಗಿಲ್ಲ. ಗ್ರಾಮದ ಮೂಲ ಸೌಲಭ್ಯಗಳ ಸುಧಾರಣೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಈ ವೇಳೆ ಮಂಜುನಾಥ ಸಂಭೋಜಿ, ರಾಜು ರಜಪೂತ ಮಾತನಾಡಿದರು. ಪ್ರತಿಭಟನೆಯಲ್ಲಿ ಈರಣ್ಣ ಅಳ್ಳಳ್ಳಿ, ಅಶೋಕ ಹುಲಗೂರ, ವೀರಣ್ಣ ಪವಾಡದ, ರಾಜರತ್ನ ಹುಲಗೂರ, ವೀರಣ್ಣ ತನಕಂಠಿ, ಚಂದ್ರು ಪತ್ತಾರ, ಚಂದ್ರಶೇಖರ ಗುರಬಸಣ್ಣನವರ, ಮಹಾಂತೇಶ ಬಮ್ಮನಕಟ್ಟಿ, ಆರ್.ಎಂ. ಹೊನಕೇರಿ, ಸಂಗಪ್ಪ ಮಾಳಗಿ, ವಿರುಪಾಕ್ಷಪ್ಪ ಶಿರಹಟ್ಟಿ, ದ್ರಾಕ್ಷಾಯಣಿ ಸಾಲಿಮಠ, ಲಲಿತವ್ವ ಹುಲಗೂರ, ಪ್ರೇಮವ್ವ ಪತ್ತಾರ, ನೇತ್ರಾವತಿ ಮಹೇಂದ್ರಕರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು, ಶಿಗ್ಲಿ ಸೇವಾ ಮಂದಿರದ ಇಷ್ಟಲಿಂಗ ಶ್ರೀಗಳು ಹಾಗೂ ನಿವೃತ್ತ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ ಸಾಂಕೇತಿಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಮಧ್ಯಾಹ್ನ ಸ್ಥಳಕ್ಕೆ ತಹಸೀಲ್ದಾರ್ ಧನಂಜಯ ಎಂ. ಹಾಗೂ ತಾಪಂ ಇಒ ಮಂಜುಳಾ ಹಕಾರಿ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ನೀತಿ ಸಂಹಿತೆ ಮುಗಿದ ತಕ್ಷಣ ರಸ್ತೆಗಳು ಸುಧಾರಣೆಯ ಕುರಿತು ಮಹತ್ವದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ಮಾದರಿಯಲ್ಲೆ ಶಿವಮೊಗ್ಗ ದಸರಾ ವೈಭವ
ಗಾಂಧೀಜಿ ಬದುಕೇ ಒಂದು ಸಂದೇಶ: ಶಾಸಕ ಆರಗ