ಎಸ್‌ಐಟಿ ಕೈಗೆ ಸಿಗದೆ ಭವಾನಿ ರೇವಣ್ಣ ಕಳ್ಳಾಟ

KannadaprabhaNewsNetwork | Updated : Jun 02 2024, 05:13 AM IST

ಸಾರಾಂಶ

ಹೊಳೆನರಸೀಪುರದ ಮನೇಲಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಲುಕ್‌ ಔಟ್‌ ನೋಟಿಸ್‌ ನೀಡುವ ಸಾಧ್ಯತೆಯಿದೆ.

  ಬೆಂಗಳೂರು/ಹೊಳೆನರಸೀಪುರ :  ತಮ್ಮ ಪುತ್ರನ ವಿರುದ್ಧದ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ ಬೆನ್ನಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರ ಪತ್ತೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ತೀವ್ರ ಹುಡುಕಾಟ ನಡೆಸಿದೆ. ಈ ಮಧ್ಯೆ, ಬಂಧನ ಭೀತಿಯಿಂದ ಭವಾನಿ ತಲೆಮರೆಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಬಂಧನ ಭೀತಿಯಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶನಿವಾರ ಸಂಜೆವರೆಗೆ ಭವಾನಿ ಅವರಿಗೆ ಎಸ್‌ಐಟಿ ಸಮಯ ನೀಡಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಭವಾನಿ ಅವರು ಎಸ್‌ಐಟಿ ನೋಟಿಸ್‌ಗೂ ಕ್ಯಾರೇ ಎಂದಿಲ್ಲ. ಹೀಗಾಗಿ, ಭವಾನಿ ಅವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿವೆ.

ಈ ಸಂಬಂಧ ಬೆಂಗಳೂರು ಮಾತ್ರವಲ್ಲದೆ ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಹ ಭವಾನಿ ಅವರಿಗೆ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಎಸ್‌ಐಟಿ ಇನ್ಸ್‌ಪೆಕ್ಟರ್‌ ಶ್ರೀಧರ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಹಾಸನ ಜಿಲ್ಲೆ ಹೊಳೆನರಸೀಪುರದ ಅವರ ಮನೆಗೆ ತೆರಳಿತ್ತು. ಸಂಜೆ ಐದು ಗಂಟೆಯ ತನಕ ಅವರಿಗಾಗಿ ಕಾದು ಕುಳಿತರೂ ಅವರು ಸಿಗಲಿಲ್ಲ. ಬಳಿಕ, ಅಧಿಕಾರಿಗಳ ತಂಡ ಬರಿಗೈಯಲ್ಲಿ ಮರಳಿದೆ ಎಂದು ಮೂಲಗಳು ತಿಳಿಸಿವೆ.

ಲುಕ್‌ ಔಟ್ ನೋಟಿಸ್ ಜಾರಿ?

ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರ ವಿರುದ್ಧ ಲುಕ್‌ ಔಟ್‌ ನೋಟಿಸ್ ಜಾರಿಗೊಳಿಸಲು ಎಸ್‌ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ. ದೇಶ ತೊರೆಯದಂತೆ ಎಲ್ಲ ವಿಮಾನ ನಿಲ್ದಾಣಗಳಿಗೆ ಭವಾನಿ ವಿರುದ್ಧ ಲುಕ್‌ ಔಟ್‌ ನೋಟಿಸ್ ಜಾರಿಯಾಗಲಿದ್ದು, ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಹೈಕೋರ್ಟ್ ಮೊರೆ ಸಾಧ್ಯತೆ?

ಈ ಮಧ್ಯೆ, ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಭವಾನಿ ರೇವಣ್ಣ ಅವರು ಮೊರೆ ಹೋಗುವ ಸಾಧ್ಯತೆಗಳಿದ್ದು, ಸೋಮವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸೋಮವಾರದವರೆಗೆ ಎಸ್‌ಐಟಿ ಕೈಗೆ ಸಿಗದಂತೆ ಅ‍ವರು ಓಡಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Share this article