ಪೆನ್‌ಡ್ರೈವ್‌ ಪ್ರಕರಣ: ಪ್ರೀತಂಗೌಡರ ಆಪ್ತರ ನಿವಾಸದ ಮೇಲೆ ಎಸ್ಐಟಿ ದಾಳಿ

KannadaprabhaNewsNetwork |  
Published : May 15, 2024, 01:37 AM IST
14ಎಚ್ಎಸ್ಎನ್19 : ಕಿರಣ್‌ ಗೌಡ ಗೆ ಸೇರಿದ ಕೃಷ್ಣ ಹೋಟೆಲ್‌ ಮುಂದೆ ನಿಂತಿರುವ ಎಸ್‌ಐಟಿ ಅಧಿಕಾರಿಗಳ ಜೀಪು. | Kannada Prabha

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ದಿನೇ ದಿನೇ ತಿರುವು ಪಡೆಯುತ್ತಿದ್ದು, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಪ್ರೀತಂಗೌಡರ ಆಪ್ತರು ಎನ್ನಲಾದ ಮೂವರ ಮೇಲೆ ಹಾಸನದಲ್ಲಿ ಎಸ್ಐಟಿ ತಂಡ ಮಂಗಳವಾರ ಸಂಜೆ ದಾಳಿ ನಡೆಸಿದೆ.

ಶರತ್‌, ಕಿರಣ್‌, ಪುನೀತ್‌ ಎಂಬುವರ ನಿವಾಸ, ಆಸ್ತಿ ಪರಿಶೀಲನೆ । ವಿಡಿಯೋ ಹಂಚಿಕೆ ಪ್ರಕರಣದಲ್ಲಿ ತಂಡದಿಂದ ಅನೇಕರ ವಿಚಾರಣೆ

ಕನ್ನಡಪ್ರಭ ವಾರ್ತೆ ಹಾಸನ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ದಿನೇ ದಿನೇ ತಿರುವು ಪಡೆಯುತ್ತಿದ್ದು, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಪ್ರೀತಂಗೌಡರ ಆಪ್ತರು ಎನ್ನಲಾದ ಮೂವರ ಮೇಲೆ ಎಸ್ಐಟಿ ತಂಡ ಮಂಗಳವಾರ ಸಂಜೆ ದಾಳಿ ನಡೆಸಿದೆ.

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಪ್ರೀತಂಗೌಡರ ಆಪ್ತ ಕ್ವಾಲಿಟಿ ಬಾರ್ ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಕೃಷ್ಣಾ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ.

ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಕ್ವಾಲಿಟಿ ಬಾರ್, ಹೋಟೆಲ್ ಶ್ರೀಕೃಷ್ಣ ಮತ್ತು ಪುನೀತ್ ಎಂಬುವವರ ಮೇಲೆ ಎಸ್‌ಐಟಿ ತಂಡವು ದಾಳಿ ನಡೆಸಿ ಕಂಪ್ಯೂಟರ್‌ನ ಹಾರ್ಡ್ ಡಿಸ್ಕ್ ಅನ್ನು ಪರಿಶೀಲಿಸಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಕ್ವಾಲಿಟಿ ಬಾರ್ ಶರತ್ ವಿರುದ್ದ ಆರಂಭದಲ್ಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ವಜಾ ಆಗಿತ್ತು. ಆ ಪ್ರಕರಣ ಇದೀಗ ಎಸ್‌ಐಟಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿರಣ್ ಅವರ ಒಡೆತನಕ್ಕೆ ಸೇರಿರುವ ಬಾರ್ ಹಾಗೂ ಹೋಟೆಲ್‌ನಲ್ಲಿ ಕೂಡ ತಪಾಸಣೆ ನಡೆಸಲಾಯಿತು. ಬಿಜೆಪಿ ಮುಖಂಡ ಪುನೀತ್ ಅವರ ಒಡೆತನಕ್ಕೆ ಸೇರಿದ ಕಚೇರಿ ಮತ್ತು ನಿವಾಸದ ಮೇಲೂ ಕೂಡ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಸಭಾ ಚುನಾವಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದ ಬೆನ್ನಲ್ಲೆ ಪ್ರಜ್ವಲ್ ಚುನಾವಣೆ ನಡೆದು ಮಾರನೆ ದಿನ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದರು.

ನಂತರದಲ್ಲಿ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತಂಡ ಈ ಬಗ್ಗೆ ತನಿಖೆ ನಡೆಸಲು ಆರಂಭಿಸಿ ಅನೇಕರನ್ನು ವಿಚಾರಣೆಗೆ ಒಳಪಡಿಸಿದೆ. ದಿನೇ ದಿನೇ ಈ ಪ್ರಕರಣ ತಿರುವು ಪಡೆಯುತ್ತಿದ್ದು, ತನಿಖಾಧಿಕಾರಿಗಳು ಕೂಡ ಚುರುಕಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ