ಭವಾನಿ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ

KannadaprabhaNewsNetwork |  
Published : Jun 01, 2024, 12:45 AM ISTUpdated : Jun 01, 2024, 08:08 AM IST
bhavani revanna

ಸಾರಾಂಶ

ಪ್ರಜ್ವಲ್‌ ತಾಯಿಗಾಗಿ ಎಸ್‌ಐಟಿ ತೀವ್ರ ತಲಾಶ್‌ ನಡೆಸುತ್ತಿದ್ದು, ಕಿಡ್ನಾಪ್‌ ಕೇಸ್‌ನಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

 ಬೆಂಗಳೂರು :  ತೀವ್ರ ಕುತೂಹಲ ಮೂಡಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನ ಬಹುತೇಕ ಖಚಿತವಾಗಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪನ್ನು ಪ್ರಕಟಿಸಿದ್ದು, ಅರ್ಜಿಯನ್ನು ತಿರಸ್ಕರಿಸಿದೆ. ಈ ನಡುವೆ, ಎಸ್‌ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ವಿಚಾರಣೆಗಾಗಿ ಹಾಜರಾಗುವಂತೆ ನೊಟೀಸ್‌ ಜಾರಿಗೊಳಿಸಿದ್ದಾರೆ. ಶನಿವಾರ ಸಂಜೆಯೊಳಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ. ವಿಚಾರಣೆಗೆ ಹಾಜರಾದ ವೇಳೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಧನ ಮಾಡುವ ಸಾಧ್ಯತೆ ಹೆಚ್ಚಿದೆ. ಬಂಧನ ಭೀತಿಯಿಂದಾಗಿ ಭವಾನಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿರೀಕ್ಷಣಾ ಜಾಮೀನು ನಿರಾಕರಣೆಯಾದ ಹಿನ್ನೆಲೆ ಸದ್ಯ ಪ್ರಕರಣದ ಬಗ್ಗೆ ಭವಾನಿ ರೇವಣ್ಣ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬುದು ಎಸ್‌ಐಟಿ ತಂಡಕ್ಕೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಶೋಧ ಆರಂಭಿಸಿದೆ. ಮನೆಯಲ್ಲಿ ಇಲ್ಲದ ಕಾರಣಕ್ಕೆ ಶುಕ್ರವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ಅನ್ನು ಬಾಗಿಲಿಗೆ ಅಂಟಿಸಿ ಬಂದಿದ್ದರು. ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿ ಹುಡುಕಾಟ ಆರಂಭಿಸಲಾಗಿದೆ. ಮಾತ್ರವಲ್ಲ, ಸಂಬಂಧಿಕರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.

ಈಗಾಗಲೇ ಇದೇ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದೀಗ ಅವರ ಪತ್ನಿ ಭವಾನಿ ರೇವಣ್ಣ ಅವರು ಸಹ ಬಂಧನಕ್ಕೊಳಗಾಗುವ ನಿರೀಕ್ಷೆ ಇದೆ.

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಬುಧವಾರ ನಡೆಸಿತ್ತು. ಈ ವೇಳೆ ಭವಾನಿ ರೇವಣ್ಣ ಪರ ವಕೀಲರು, ಎಸ್‌ಐಟಿ ಜಾರಿ ಮಾಡಿರುವ ನೊಟೀಸ್‌ನಲ್ಲಿ ಯಾವುದೇ ಕಾನೂನಿನ ನಿಬಂಧನೆ ಉಲ್ಲೇಖ ಇಲ್ಲ. ಹೀಗಾಗಿ ಅರ್ಜಿದಾರರಿಗೆ ಬಂಧನ ಭೀತಿ ಇದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಾದಿಸಿದ್ದರು.

ಇನ್ನು, ಎಸ್ಐಟಿ ಪರ ವಕೀಲರು, ಮಹಿಳೆ ಅಪಹರಣ ಪ್ರಕರಣದಲ್ಲಿ ಅರ್ಜಿದಾರರಾದ ಭವಾನಿ ವಿರುದ್ಧ ಗಂಭೀರ ಆರೋಪ ಇದೆ. ಅವರನ್ನು‌ ವಿಚಾರಣೆಗೊಳಪಡಿಬೇಕಾಗಿದೆ. ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ