ಶಿವಮೊಗ್ಗ: ಮುಂದಿನ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 8 ರಿಂದ 12ನೇ ತರಗತಿಯ ವರೆಗಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಕೌಶಲ್ಯಾಧಾರಿತ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನಪಾಯ ಇಲಾಖೆ, ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಕೌಶಲ್ಯ ಮತ್ತು ರೋಜ್ ಗಾರ್ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿಯೇ ಕೌಶಲ್ಯಾಧಾರಿತ ಶಿಕ್ಷಣ ನೀಡುವುದರಿಂದ ಅವರ ಭವಿಷ್ಯದ ಬದುಕು ಉಜ್ವಲವಾಗಲಿದೆ ಅಲ್ಲದೆ ತಮಗಿಷ್ಟವಾದ ಕ್ಷೇತ್ರದಲ್ಲಿ ನೈಪುಣ್ಯತೆ ಪಡೆದು, ಅಪೇಕ್ಷೆಯ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬಹುದಾಗಿದೆ ಎಂದರು.ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದಲ್ಲಿ ಆಗಮಿಸುವ ಉದ್ಯೋಗದಾತರ ಸಂಖ್ಯೆ ಅತ್ಯಂತ ಕಡಿಮೆ ಇರಲಿದೆ. ಆದ್ದರಿಂದ ಮುಂದಿನ ಸಾಲಿನಿಂದ ಅನ್ವಯಗೊಳ್ಳುವಂತೆ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಳ್ಳುವ ಉದ್ಯೋಗ ಮೇಳಗಳಿಗೆ ಉದ್ಯೋಗಾಕಾಂಕ್ಷಿ ನೋಂದಾಯಿತ ವಿದ್ಯಾರ್ಥಿಗಳು ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಂದ ನಗರ ಪ್ರದೇಶಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಉದ್ಯೋಗ ಮೇಳದಲ್ಲಿ ನೆರೆಯ ಜಿಲ್ಲೆಗಳು ಸೇರಿದಂತೆ ರಾಜ್ಯದ 45ಕ್ಕೂ ಹೆಚ್ಚಿನ ಕಂಪನಿಗಳ ಉದ್ಯೋಗದಾತರು ಆಗಮಿಸಿರುವುದು ವಿಶೇಷವಾಗಿದೆ. ಉದ್ಯೋಗಾಕಾಂಕ್ಷಿಗಳು ತಮಗೆ ಇಷ್ಟವಾದ ಕೆಲಸ ಮತ್ತು ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಆನ್ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಉದ್ಯಶೀಲತೆಯ ದಕ್ಷ ಗುಣಗಳು, ವ್ಯಕ್ತಿತ್ವ ವಿಕಸನ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಮಾರುಕಟ್ಟೆ ಸಮೀಕ್ಷೆ, ಬ್ಯಾಂಕ್ ವ್ಯವಹಾರ, ವಿವಿಧ ಸಾಲ ಸೌಲಭ್ಯಗಳ ಮಾಹಿತಿ ಕೂಡ ದೊರೆಯಲಿದೆ ಎಂದರು.ಪ್ರಸ್ತುತ ಉದ್ಯೋಗ ಮೇಳದಲ್ಲಿ ನಿರೀಕ್ಷೆಗೂ ಮೀರಿ ಉದ್ಯೋಗ ಆಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದರು.
ಸಂಕಷ್ಟದಲ್ಲಿರುವ ಯುವ ವಿದ್ಯಾರ್ಥಿಗಳಿಗೆ ಯುವನಿಧಿ ಗ್ಯಾರಂಟಿ ಯೋಜನೆಯು ಉಪಕಾರಿಯಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ 5544 ವಿದ್ಯಾರ್ಥಿಗಳಿಗೆ ಯಾವುದೇ ಮದ್ಯವರ್ತಿಗಳಿಲ್ಲದೆ ಈವರೆಗೆ 11 ಕೋಟಿ ರು.ಗಳ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸುಮಾರು 53000 ಕೋಟಿ ರು. ಖರ್ಚು ಮಾಡಲಾಗಿದೆ. ಇದರೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ವೇಗ ಹೆಚ್ಚಿಸಲಾಗಿದೆ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಶಿಕ್ಷಣದ ಜೊತೆಗೆ ಕೌಶಲ್ಯ ಆಧಾರಿತ ತರಬೇತಿಗಳ ತುರ್ತು ಅಗತ್ಯವಿರುವುದನ್ನು ಗಮನಿಸಿ, ಪಠ್ಯದೊಂದಿಗೆ ಕೌಶಲ್ಯ ತರಬೇತಿಗಳನ್ನು ಸರ್ಕಾರ ಆರಂಭಿಸುತ್ತಿರುವುದು ಅಭಿನಂದನೀಯ ಎಂದ ಅವರು, ದೇಶದ ಎಲ್ಲಾ ಯುವಕರಿಗೆ ಯಾವುದೇ ಉದ್ಯೋಗ ಒದಗಿಸಿ, ಅವರ ಉತ್ತಮ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿಪ ಸದಸ್ಯೆ ಬಲ್ಕಿಶ್ ಬಾನು, ಜಿಪಂ ಸಿಇಒ ಎನ್.ಹೇಮಂತ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಆರ್.ರವಿಕುಮಾರ್, ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮತ್ತಿತರರಿದ್ದರು.2778 ಅಭ್ಯರ್ಥಿಗಳು ಭಾಗಿನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗಮೇಳಕ್ಕೆ ಒಟ್ಟು 3800 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 2778 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು. ಒಟ್ಟು 683 ಅಭ್ಯರ್ಥಿಗಳ ಶಾರ್ಟ್ ಲೀಸ್ಟ್ ಮಾಡಲಾಗಿದ್ದು, 324 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆಫರ್ ಲೆಟರ್ ನೀಡಲಾಯಿತು. ಮೇಳದಲ್ಲಿ 39 ವಿವಿಧ ಕಂಪನಿಗಳು ಭಾಗವಹಿಸಿದ್ದವು.