ಯಶಸ್ಸಿನ ಬದುಕಿಗೆ ಕೌಶಲಯುತ ಶಿಕ್ಷಣ ಅತ್ಯಗತ್ಯ: ಕೆಆರ್‌ ಪಂಡಿತ್

KannadaprabhaNewsNetwork |  
Published : Aug 12, 2025, 12:32 AM IST
ಯಶಸ್ಸಿನ ಬದುಕಿಗೆ ಕೌಶಲಯುತ ಶಿಕ್ಷಣ ಅತ್ಯಗತ್ಯ -ಕೆ ಆರ್ ಪಂಡಿತ್ | Kannada Prabha

ಸಾರಾಂಶ

ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ, ಎನ್ಎಸ್ಎಸ್, ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಿಸ್ತು, ಸಂಯಮದ ನಡವಳಿಕೆ ಬೌದ್ಧಿಕ ವಿಕಾಸಕ್ಕೆ ಪೂರಕ. ಸ್ವಯಂಪ್ರೇರಣೆಯಿಂದ ಪ್ರಾಮಾಣಿಕವಾಗಿ ಸಲ್ಲಿಸುವ ಸೇವೆ ಸಾರ್ಥಕ ಬದುಕಿಗೆ, ಸಮಾಜದ ಉನ್ನತಿಗೆ ಸಹಾಯಕ. ಕಠಿಣ ಪರಿಶ್ರಮ ಮತ್ತು ಕೌಶಲಗಳು ಯಶಸ್ಸಿನ ಆಧಾರಸ್ತಂಭಗಳು ಎಂದು ಮೂಡುಬಿದಿರೆ ಹಿರಿಯ ನ್ಯಾಯವಾದಿ ಕೆ.ಆರ್‌. ಪಂಡಿತ್‌ ಹೇಳಿದ್ದಾರೆ.ಇಲ್ಲಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ, ಎನ್ಎಸ್ಎಸ್, ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಹಿರಿಯರ ಅನುಭವದ ಮಾತು ಕಿರಿಯರಿಗೆ ದಾರಿದೀಪ. ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು, ಗೊಬ್ಬರ ಕೊಟ್ಟು ಬಂದ ಕಳೆಯನ್ನು ಕಾಲಕಾಲಕ್ಕೆ ಕೀಳುತ್ತ ಮುಂದೆ ಫಲವನ್ನು ಪಡೆಯುವಂತೆ ಬದುಕೆಂಬ ತೋಟದಲ್ಲಿ ಗುಣಗಳಿಗೆ ನೀರೆರೆದು ಪೋಷಿಸಿ ದೋಷಗಳನ್ನು ನಿವಾರಿಸಿಕೊಂಡಾಗ ಅರ್ಥಪೂರ್ಣವೂ ಸಮಾಜಕ್ಕೆ ಉಪಯುಕ್ತ ಜೀವನವೂ ನಮ್ಮದಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಸಮಾಜ ಸೇವೆಯ ಮೂಲಕ ದೇಶದ ಅಭಿವೃದ್ಧಿಯ ಕನಸು ಕಾಣಬೇಕಾದರೆ ಶಾಲೆ ಕಾಲೇಜುಗಳಲ್ಲಿ ವಿವಿಧ ಘಟಕಗಳ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ನೋಡಿ ಕಲಿ ಮಾಡಿ ತಿಳಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.ಇಂದಿನ ಸವಾಲಿನ ಪಾಠಗಳು ಮುಂದಿನ ಸಂತೋಷದ ಬದುಕಿಗೆ ಪ್ರೇರಣೆಯಾಗುತ್ತದೆ. ಇಂದು ಬದುಕಿನಲ್ಲಿ ಮಾಡಿಕೊಳ್ಳುವ ಚಿಕ್ಕ ಬದಲಾವಣೆ ದೊಡ್ಡ ಸಾಧನೆಗೆ ಕಾರಣವಾಗುತ್ತದೆ. ಜೀವನವನ್ನು ಬಂದ ರೀತಿಯಲ್ಲಿ ಸ್ವೀಕರಿಸುವುದು ಒಂದು ಕಲೆ. ಧೈರ್ಯ ಮತ್ತು ಸಾಹಸದ ಬದುಕಿಗೆ ನಮ್ಮನ್ನು ತೆರೆದುಕೊಂಡಾಗ ನೈಜ ಜೀವನ ದರ್ಶನವಾಗುತ್ತದೆ ಎಂದು ನುಡಿದರು.

ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಮಹೇಂದ್ರ ಜೈನ್, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ತೇಜಸ್ವಿ ಭಟ್, ರೋವರ್ಸ್ ಅಧಿಕಾರಿ ಪ್ರದೀಪ್ ಕೆಪಿ ಮತ್ತು ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು ಇದ್ದರು.

ರೆಡ್‌ಕ್ರಾಸ್‌ ಅಧಿಕಾರಿ ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ರೋವರ್ಸ್ ವಿದ್ಯಾರ್ಥಿ ರೇವಣ್ಣ ಸಿದ್ದು ಮತ್ತು ರೆಡ್ ಕ್ರಾಸ್ ವಿದ್ಯಾರ್ಥಿ ಮನ್ನಾ ಭೋಜಕ್ಕ ಅತಿಥಿಗಳನ್ನು ಪರಿಚಯಿಸಿದರು. ಎನ್ ಸಿಸಿ ಕೆಡೆಟ್ ದಿಶಾಂತ್ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್ಎಸ್ಎಸ್ ಸ್ವಯಂಸೇವಕಿ ರಶ್ಮಿತಾ ಶೆಟ್ಟಿ ನಿರೂಪಿಸಿದರು. ರೇಂಜರ್ಸ್ ಅಧಿಕಾರಿ ಸಂಧ್ಯಾ ನಾಯಕ್ ವಂದಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ