ಸಹಕಾರ ಸಂಘಗಳ ಅಧ್ಯಕ್ಷರಿಗೆ ರಾಜ್ಯಮಟ್ಟದ ವಿಶೇಷ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಮಡಿಕೇರಿಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಉತ್ತಮ ಜೀವನಕ್ಕಾಗಿ ಸದಾಕಾಲ ನಾವು ಕಲಿಯುತ್ತಿದಲ್ಲಿ ಕೌಶಲ್ಯ ವೃದ್ಧಿಸುತ್ತದೆ. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಿಂದ ಸಹಕಾರ ಕ್ಷೇತ್ರದ ವಿವಿಧ ವಲಯಗಳ ಬವಲರ್ಧನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಸಹಕಾರ ಸಂಘಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎನ್.ಎಂ. ಉಮೇಶ್ ಉತ್ತಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರಿಗೆ ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು ಮತ್ತು ಸೈಬರ್ ಭದ್ರತೆ ಕುರಿತು ನಗರದ ಮಯೂರ ವ್ಯಾಲಿ ವ್ಯೂ ಹೊಟೇಲ್‌ನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಪ್ರತಿ ವರ್ಷದಂತೆ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರಿಗೆ ಹೈಟೆಕ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಕ್ತ ಹಾಗೂ ಪ್ರಶಾಂತ ವಾತಾವರಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲೆಯ ಸಹಕಾರ ಸಂಘಗಳು ತಮ್ಮ ಲಾಭಾಂಶದಲ್ಲಿ ನೀಡುವ ಶಿಕ್ಷಣ ನಿಧಿಯನ್ನು ನೇರವಾಗಿ ಮಹಾಮಂಡಳದ ಖಾತೆಗೆ ಜಮಾ ಮಾಡಲಾಗುತ್ತದೆ. ಸದರಿ ಮೊತ್ತದಲ್ಲಿ ರಾಜ್ಯದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳಲು ಅನುದಾನ ನೀಡುತ್ತಾರೆ. ಇದೇ ಮೊತ್ತದಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಮ್ಯಾನೇಜ್‌ಮೆಂಟ್ ತರಬೇತಿಗಳನ್ನು ಸಹ ನಡೆಸಿ ಕಾಲೇಜು ನಿರ್ವಹಣೆ, ವಿದ್ಯಾರ್ಥಿಗಳಿಗೆ ವಸತಿ ಇತ್ಯಾದಿಗಳನ್ನು ಸಹ ಭರಿಸಬೇಕಿದೆ. ನಮ್ಮ ಜಿಲ್ಲೆಯಲ್ಲಿ ಕೂಡ ಸಹಕಾರ ಸಂಘಗಳು ಉತ್ತಮವಾಗಿ ಸಹಕಾರ ನೀಡುತ್ತಾ ಶೇ.100ರಷ್ಟು ಸಹಕಾರ ಶಿಕ್ಷಣ ನಿಧಿ ಸಂಗ್ರಹಣೆಗೆ ಕೈಜೋಡಿಸುತ್ತಿವೆ ಎಂದರು.ಪ್ರತಿ ವರ್ಷ ಸಂಘಗಳ ಲಾಭಾಂಶದಲ್ಲಿ ಏರಿಕೆಯಾಗುತ್ತಿರುವುದನ್ನು ಅವಲೋಕಿಸಿದರೆ ಶಿಕ್ಷಣ, ತರಬೇತಿಯೊಂದಿಗೆ ಸಂಘಗಳ ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮ ಅಭಿವ್ಯಕ್ತವಾಗುತ್ತದೆ. ಸಹಕಾರ ಸಂಘದ ಲಾಭವನ್ನು ಮಾತ್ರ ನಿರೀಕ್ಷಿಸುವ ನಾವು ಇತರ ಸೇವೆಗಳ ಕುರಿತು ಕೃತಜ್ಞರಾಗಿರಬೇಕು ಸಹಕಾರ ಸಂಘಗಳು ಸಾಲ ನೀಡುವುದು ಮಾತ್ರವಲ್ಲದೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಗುಣವಾಗುವಂತೆ ಕೇಂದ್ರ ಸರ್ಕಾರವು ಸಹಕಾರ ಸಂಘಗಳನ್ನು ಬಲಿಷ್ಠವನ್ನಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಂಘಗಳು ಅಳವಡಿಸಿಕೊಂಡು ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿ, ಜಿಲ್ಲಾ ಸಹಕಾರ ಯೂನಿಯನ್‌ನ ದತ್ತಿ ನಿಧಿಗೆ ಕೊಡುಗೆ ನೀಡಿದ ಕನ್ನಂಡ ಸಂಪತ್, ಚೆಟ್ಟಳ್ಳಿ ಪ್ಯಾಕ್ಸ್‌ನ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ವಂದನೆಗಳನ್ನು ಸಲ್ಲಿಸಿದರು.ಕೊಡಗು ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ಸಹಕಾರ, ಪತ್ರಿಕೋದ್ಯಮ, ವೈದ್ಯಕೀಯ, ರಕ್ಷಣಾ ಕ್ಷೇತ್ರ ಅಂತೆಯೇ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಹೆಸರು ಗಳಿಸಿದೆ. ಆದುದರಿಂದ ಕೊಡಗು ವಿಶ್ವವಿದ್ಯಾನಿಲಯವನ್ನು ಯಾವುದೇ ಕಾರಣಕ್ಕೂ ವಿಲಿನಗೊಳಿಸಬಾರದು ಎಂದು ಆಗ್ರಹಿಸಿದರು.ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್.ಎಸ್. ನಾಗರಾಜಯ್ಯ, ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು, ಸಭೆಗಳು, ಆಡಳಿತ ಮಂಡಳಿ ಚುನಾವಣೆ ಇತ್ಯಾದಿ ವಿಷಯದ ಕುರಿತು ಹಾಗೂ ಸೈಬರ್ ಹಾವಳಿ, ತಡೆಗೆ ಕೈಗೊಳ್ಳಬಹುದಾದ ಕ್ರಮಗಳು ವಿಷಯದ ಕುರಿತು ಅಂಕಣಕಾರರು, ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿಮಾರ್ಗದರ್ಶಕ ಆರ್.ಕೆ. ಬಾಲಚಂದ್ರ ಉಪನ್ಯಾಸ ನೀಡಿದರು.ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಬಿ.ಎ. ರಮೇಶ್ ಚಂಗಪ್ಪ, ಕೆ.ಎಂ. ತಮ್ಮಯ್ಯ, ಸಿ.ಎಸ್. ಕೃಷ್ಣ ಗಣಪತಿ, ಪಿ.ವಿ. ಭರತ್, ಪಿ.ಬಿ. ಯತೀಶ್, ಎನ್.ಎ. ರ‍್ಯಾಲಿ ಮಾದಯ್ಯ ಉಪಸ್ಥಿತರಿದ್ದರು.ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳಾ, ಪ್ರಾರ್ಥಿಸಿ, ಸ್ವಾಗತಿಸಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.