ಸಿ.ಸಿದ್ದರಾಜು, ಮಾದಹಳ್ಳಿ
ದಕ್ಷಿಣ ಭಾಗದ ಕಾವೇರಿ ಕೊಳ್ಳದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡು ಕಾವೇರಿ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ, ಭರಚುಕ್ಕಿ ಜಲಪಾತಕ್ಕೆ ಮತ್ತೆ ನೈಸರ್ಗಿಕ ಜೀವಕಳೆ ಬರುತ್ತಿದೆ.
ಎರಡು ಜಲಪಾತಗಳಿಂದ ಗಗನದಿಂದ ನೊರೆಹಾಲಿನಂತೆ ಭೋರ್ಗೆರೆಯುತ್ತಾ ದುಮ್ಮಿಕ್ಕಿ ಹರಿಯುವ ನೀರಿನ ರಮಣೀಯ ದೃಶ್ಯ ನೋಡಲು ಕಣ್ಣೆರಡು ಸಾಲದಾಗಿದೆ. ಇದರಿಂದ ಗಗನಚುಕ್ಕಿ ಜಲಪಾತವು ತನ್ನ ಹಳೇ ವೈಭವವನ್ನು ಪಡೆಯುವತ್ತ ಹೊರಟಿದೆ. ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ನ ಹೆಚ್ಚುವರಿ ನೀರು ಹಾಗೂ ಕಬಿನಿ ಜಲಾಶಯ ಭರ್ತಿಯಾಗಿದ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ಜಲಪಾತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಜಲಪಾತ ತನ್ನ ನೈಸರ್ಗಿಕ ಸೌಂದರ್ಯವನ್ನು ಪಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಜೂನ್ ತಿಂಗಳಿಂದ ಆರಂಭವಾಗುವ ಮುಂಗಾರು ಮಳೆ ಸೆಪ್ಟೆಂಬರ್ ವರೆಗೆ ಸುರಿಯುತ್ತದೆ. ಕಳೆದ ಒಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಗಿಡಮರಗಳು ಚಿಗುರೊಡೆದು ಬೆಟ್ಟಗುಡ್ಡಗಳು ಹಚ್ಚಹಸಿರಿನಿಂದ ಕಂಗೋಳಿಸುತ್ತಿರುವ ಮಧ್ಯೆ ಕಾವಲು ಹೊಡೆದು ಹರಿದು ಬರುವ ಕಾವೇರಿ ನದಿ ನೀರು ಗಗನಚುಕ್ಕಿ, ಭರಚುಕ್ಕಿ ಬಳಿ ಸುಮಾರು 90 ಅಡಿ ಎತ್ತರದಿಂದ ಭೋರ್ಗೆರೆಯುತ್ತಾ ದುಮ್ಮುಕ್ಕುತ್ತಿರುವುದು ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.
ಅವಳಿ ಜಲಪಾತಕ್ಕೆ ಸರಿಸಾಟಿಯೇ ಇಲ್ಲ:
ನೊರೆಹಾಲಿನಂತೆ ಭರದಿಂದ ಸದ್ದು ಮಾಡುತ್ತಾ ದುಮ್ಮಿಕ್ಕಿ ಹರಿಯುವ ನದಿಗೆ ಭರಚುಕ್ಕಿ ಎಂದು ಹೆಸರು ಬಂದಿದೆ. ಇದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿಗೆ ಸೇರಿದೆ. ಈ ಎರಡು ಪ್ರವಾಸಿ ತಾಣಗಳು ಕಾವೇರಿ ಮತ್ತು ಇತರೆ ಉಪನದಿಗಳಿಂದ ನಿರ್ಮಿತವಾಗಿವೆ. ಈ ಅವಳಿ ಜಲಪಾತಗಳ ಜಲಸಿರಿಗೆ ಸರಿಸಾಟಿಯೇ ಇಲ್ಲ ಎನ್ನುವ ಮಾತಿದೆ.
ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತವನ್ನು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು, ವಿಶ್ವದ್ಯಾಂತ ಪರಿಚಯಿಸಲು ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಸಹಕಾರದಲ್ಲಿ ಜಲಪಾತೋತ್ಸವವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸುತ್ತಾ ಬರಲಾಗುತ್ತಿತ್ತು.
ಕೋವಿಡ್ ಎದುರಾದಾಗ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಬರ ಪರಿಸ್ಥಿತಿಯಿಂದಾಗಿ ಕಳೆದ ಕೆಲ ವರ್ಷಗಳಿಂದ ಜಲಪಾತೋತ್ಸವನ್ನು ನಿಲ್ಲಿಸಲಾಗಿದೆ. ಈ ವರ್ಷವಾದರೂ ವರುಣ ಕಣ್ಣು ಬಿಟ್ಟು ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಕಾವೇರಿ ನದಿಯಲ್ಲಿ ನೀರು ಹರಿದು ಗಗನಚುಕ್ಕಿ, ಭರಚುಕ್ಕಿಯು ತನ್ನ ಜೀವಕಳೆ ಪಡೆದರೆ ಮಾತ್ರ ಈ ವರ್ಷ ಜಲಪಾತೋತ್ಸವಕ್ಕೆ ಅವಕಾಶ ದೊರೆಯಲಿದೆ.
90 ಅಡಿಗೂ ಹೆಚ್ಚು ಎತ್ತರದಿಂದ ನೊರೆಹಾಲಿನಂತೆ ದುಮ್ಮುಕ್ಕುವ ನೀರು, ಪ್ರಕೃತಿ ಸೌಂದರ್ಯದ ಸೊಬಗನ್ನು ಹತ್ತಿರದಿಂದ ನೋಡಬೇಕೆನ್ನುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಕುಳಿತುಕೊಳ್ಳಲು ಗಗನಚುಕ್ಕಿ ಜಲಪಾತದಲ್ಲಿ ಕಾಮಗಾರಿ ನಡೆಯುತ್ತಿದೆ.
ಕಾರ್ಯರೂಪಕ್ಕೆ ಬಾರದ ರೋಪ್‌ವೇ ನಿರ್ಮಾಣ:
ಕಾವೇರಿ ನದಿಯೂ ಸತ್ತೇಗಾಲದ ಬಳಿ ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ. ಕೆಲವು ಮೀಟರ್‌ಗಳವರೆಗೆ ಹರಿದ ನಂತರ ಕಾವೇರಿ ನೀರು ಎರಡು ವಿಭಜಕ ಜಲಪಾತಗಳಾಗಿ ಹರಿಯುತ್ತವೆ. ಗಗನಚುಕ್ಕಿ- ಭರಚುಕ್ಕಿಯನ್ನು ನೋಡಲು ಪ್ರವಾಸಿಗರು ಸುಮಾರು 15 ಕಿ.ಮೀ ಸುತ್ತಬೇಕಾಗುತ್ತದೆ.ಗಗನಚುಕ್ಕಿ- ಭರಚುಕ್ಕಿ ಜಲಪಾತಗಳ ಮಧ್ಯೆ ರೋಪ್‌ವೇ ನಿರ್ಮಿಸಿದರೇ ಕೇವಲ ಮೂರ್ನಾಲ್ಕು ಕಿ.ಮೀ ನಡುವೇ ಎರಡು ಜಲಪಾತವನ್ನು ಒಂದೇ ಭಾರಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಸರ್ಕಾರಗಳು ಕೂಡ ಗಮನ ಹರಿಸಿದರೂ ಇಂದಿಗೂ ರೋಪ್‌ವೇ ನಿರ್ಮಿಸಲು ಸಾಧ್ಯವಾಗಿಲ್ಲ. ರೋಪ್ ವೇ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಭರವಸೆ ನೀಡುತ್ತಾರೆ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಇಂದಿಗೂ ಸಾಧ್ಯವಾಗಿಲ್ಲ.