ಧಾರ್ಮಿಕ ನಂಬಿಕೆ ಮೇಲೆ ನಿಧಾನವಾಗಿ ನಿರ್ಬಂಧ: ಬಿ.ಎಲ್.ಸಂತೋಷ್ ಆತಂಕ

KannadaprabhaNewsNetwork |  
Published : Jan 27, 2026, 02:45 AM IST
26ಕೆಎಂಎನ್ ಡಿ17 | Kannada Prabha

ಸಾರಾಂಶ

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಬಾರದು, ಅದೇ ರೀತಿ ಬೇರೆಯವರ ಜನಸಂಖ್ಯೆಯೂ ಹೆಚ್ಚಾಗಬಾರದು. ಒಂದು ಕಡೆ ಧಾರ್ಮಿಕ ಆಚರಣೆಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಮತೊಂದು ಕಡೆ ಮತಾಂತರ ಪ್ರಕರಣಗಳೂ ಹೆಚ್ಚುತ್ತಿವೆ. ಇಂತಹ ಸವಾಲುಗಳನ್ನು ಹಿಂದೂ ಸಮಾಜ ಸಮರ್ಥವಾಗಿ ಎದುರಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಧಾರ್ಮಿಕ ನಂಬಿಕೆಗಳ ಮೇಲೆ ನಿಧಾನವಾಗಿ ನಿರ್ಬಂಧ ಹೇರುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಹನಕೆರೆ ಗ್ರಾಮದ ರೈತ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿ, ಹಿಂದೂಗಳು ಆಚರಿಸುವ ಗಣೇಶ, ಶಾರದಾ, ದುರ್ಗಾ, ಸೇರಿದಂತೆ ಇತರೆ ಮೆರವಣಿಗೆ ಮೇಲೆ ಕಲ್ಲು ಎಸೆದು ಹಲ್ಲೆ ಮಾಡುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಸಾಮರಸ್ಯೆ ಕೆಡಿಸುವ ಸ್ಥಿತಿಗೆ ತಂದು ನಿಲ್ಲಿಸಲಾಗುತ್ತಿದೆ ಎಂದು ಎಚ್ಚರಿಸಿದರು.

ಪಾಕಿಸ್ತಾನ, ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಯಿತು. ಒಂದು ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂಗಳು ಅಲ್ಪಸಂಖ್ಯಾತರಾದರು. ನಂತರದ ದಿನಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹತ್ಯೆಯಂತ ಪ್ರಕರಣ ಹೆಚ್ಚಾಯಿತು ಎಂದರು.

ಪ್ರಸ್ತುತ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ದೇಶದ ಕೆಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕಡೆಗಳಲ್ಲಿ ಹಿಂದೂಗಳು ಗೆಲಲ್ಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಒಂದು ಪಕ್ಷ ಮಾತ್ರ ಚಿಂತನೆ ಮಾಡುವಂತಹುದ್ದಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಬಾರದು, ಅದೇ ರೀತಿ ಬೇರೆಯವರ ಜನಸಂಖ್ಯೆಯೂ ಹೆಚ್ಚಾಗಬಾರದು. ಒಂದು ಕಡೆ ಧಾರ್ಮಿಕ ಆಚರಣೆಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಮತೊಂದು ಕಡೆ ಮತಾಂತರ ಪ್ರಕರಣಗಳೂ ಹೆಚ್ಚುತ್ತಿವೆ. ಇಂತಹ ಸವಾಲುಗಳನ್ನು ಹಿಂದೂ ಸಮಾಜ ಸಮರ್ಥವಾಗಿ ಎದುರಿಸಬೇಕಾಗಿದೆ. ತಲ ತಲಾಂತರಗಳಿಂದಲೂ ಇಂತಹುದ್ದೇ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಎಚ್ಚರಿಕೆ ನೀಡಿದರು.

ಘಜ್ನಿ ಮೊಹಮ್ಮದ್ ಹಲವು ಬಾರಿ ದಾಳಿ ನಡೆಸಿದಾಗಲೂ ಸೋಮನಾಥನನ್ನು ಏನೂ ಮಾಡಲಾಗಲಿಲ್ಲ. ಅಲ್ಲಿ ಈಗಲೂ ಕೋಟ್ಯಂತರ ಭಕ್ತರು ದರ್ಶನ ಮಾಡುತ್ತಿದ್ದಾರೆ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ನಡೆಸಿದ ದೌರ್ಜನ್ಯ, ಅತ್ಯಾಚಾರ, ಅನಾಚಾರಗಳು ಒಂದೇ ಎರಡೇ.., ಆದರೂ ಅಲ್ಲಿ ಶ್ರೀರಂಗನಾಥನ ಪೂಜೆ ತಪ್ಪಲಿಲ್ಲ. ಬೇಲೂರು, ಹಳೇಬೀಡಿನಲ್ಲೂ ಆಕ್ರಮಣ ನಡೆದಿತ್ತು. ಆದರೂ ಅಲ್ಲಿ ಚನ್ನಕೇಶನವನ ಪೂಜೆ ನಿಂತಿಲ್ಲ ಎಂದು ಪ್ರತಿಪಾದಿಸಿದರು.

ಲ್ಯಾಂಡ್ ಜಿಹಾದ್, ಲವ್ ಜಿಹಾದ್ ನಂತಹ ಪ್ರಕರಣ ನಡೆಯುತ್ತಿವೆ. ಭಾರತೀಯರು ಪೂಜಿಸುವ ಗೋವನ್ನು ಅತ್ಯಂತ ನಿರ್ಧಯ, ಧಾರುಣವಾಗಿ ಹತ್ಯೆ ಮಾಡುವ ಮೂಲಕ ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಘಟನೆಗಳಿಂದಾಗಿ ಪ್ರಫುಲ್ಲವಾದ ಮನಸ್ಸು ಇಲ್ಲವಾಗಿದೆ. ಅನೇಕ ಮೌಲ್ಯಗಳು ಶಿಥಿಲವಾಗುತ್ತಿವೆ. ಸಂಬಂಧಗಳು ಹಾಳಾಗುತ್ತಿವೆ, ಅಭ್ಯಾಸಗಳು ಹಗುರವಾಗುತ್ತಿವೆ. ಹೆಣ್ಣು ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತ ವಿಶ್ವಗುರುವಾಗಿದೆ. ಎಲ್ಲ ದೇಶಗಳೂ ಭಾರತದತ್ತ ನೋಡುತ್ತಿವೆ. ಇಲ್ಲಿನ ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವನ್ನೂ ಅಳವಡಿಸಿಕೊಳ್ಳುವತ್ತ ದಾಪುಗಾಲು ಇಟ್ಟಿವೆ. ಬೇರೆ ಬೇರೆ ರಾಷ್ಟ್ರಗಳಿಗೆ ಭಾರತ ಅಧ್ಯಯನದ ವಸ್ತುವಾಗುತ್ತಿದೆ. ಕುಂಭ ಮೇಳಕ್ಕೆ 60 ಕೋಟಿ ಜನ ಬಂದಿದ್ದರು. ಇದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ನಮ್ಮ ಮಧ್ಯದಲ್ಲಿ ಸೃಷ್ಟಿಯಾಗಿರುವ ಶಿಥಿಲತೆ ನಿವಾರಣೆ ಮಾಡಿ ಅಖಂಡ ಸಮಾಜ ನಿರ್ಮಾಣ ಮಾಡುವುದೇ ಹಿಂದೂ ಸಮಾಜೋತ್ಸವ ಆಚರಣೆಯ ಉದ್ದೇಶವಾಗಿದೆ. ಹಿಂದೂ ಸಮಾಜ ಹೊರಹೊಮ್ಮಬೇಕಾದರೆ ಬೇದರಹಿತವಾದ ಹಿಂದೂ ಸಮಾಜ ನಿರ್ಮಾಣ ಆಗಬೇಕು. ಯಾವುದೇ ಪಕ್ಷವಾಗಿರಲಿ, ಹಿಂದೂಗಳು ಗೆಲ್ಲಬೇಕೆಂಬ ಸಂಕಲ್ಪ ಮಾಡಬೇಕು. ಜನಸಂಖ್ಯೆಯ ಅನುಪಾತ ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಪೂಜೆ ಮತ್ತು ಜೀವನ ಪದ್ಧತಿ ಮುಂದುವರಿಸಬೇಕು ಎಂದರು.

ಗೌರಿಗದ್ದೆ ಆಶ್ರಮದ ಅವಧೂತ ಶ್ರೀವಿನಯ್‌ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹಿಂದೂ ಸಮಾಜೋತ್ಸವ ಒಂದು ಪವಿತ್ರ ಕಾರ್ಯಯಕ್ರಮ. ಮನುಷ್ಯರಲ್ಲಿ ಇರುವ ಆಹಂಕಾರವನ್ನು ಕಡಿಮೆ ಮಾಡುವ ಶಕ್ತಿ ತೀರ್ಥಕ್ಕಿದೆ. ಹಾಗಾಗಿ ಭಾರತ ತೀರ್ಥಕ್ಷೇತ್ರವಾಗಿದೆ. ಅಮೃತ ಕಳಸ ಇರುವುದು ಶ್ರೀರಂಗಪಟ್ಟಣದ ಶ್ರೀರಂಗನಾಥನ ಪಾದದ ಕೆಳಗೆ. ಇಲ್ಲಿ ಕಾವೇರಿ ಹರಿಯುತ್ತಿದ್ದಾಳೆ. ಹನುಮಂತ ದೇವರು ಇರುವುದೂ ಇಲ್ಲಿಯೇ. ಹಾಗಾಗಿ ಇಷ್ಟು ಪವಿತ್ರವಾದ ಮಂಡ್ಯ ಜಿಲ್ಲೆಯಲ್ಲಿ ಪುಣ್ಯದ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಾಹಕ ರವಿಕುಮಾರ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ