
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ನಿಮಾಹೊಸಳ್ಳಿ ನಿಮಾಹೋಸಳ್ಳಿ ಗ್ರಾಮದ ಮುಖ್ಯ ರಸ್ತೆಯ ಈದ್ಗಾ ಮೈದಾನದ ಹತ್ತಿರ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ನಿರ್ಮಿಸಿದ ಮನೆಗಳ ದುಸ್ಥಿತಿ ಶಿಥಿಲಗೊಂಡು ಮನೆಗಳನ್ನು ಬುಧವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ನಿರ್ವಹಣೆಯಿಲ್ಲದೆ ಮನೆಗಳ ಬಾಗಿಲು, ಕಿಟಕಿ ಹಾಗೂ ಗೋಡೆಯ ಇಟ್ಟಿಗೆಗಳು ಒಡೆದು ಹೋಗಿದ್ದು, ಛಾವಣಿ (ಛತ್ತು) ಉದುರಿ ಬೀಳುವ ಹಂತಕ್ಕೆ ತಲುಪಿವೆ. ಇಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಪುರಸಭೆ, ಸಹಾಯಕ ಆಯುಕ್ತರು ಮತ್ತು ತಾಲೂಕು ಆಡಳಿತ ಸಂಪೂರ್ಣ ಕಣ್ಣುಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಸ್ವಂತವಾಗಿ ಮನೆ ಕಟ್ಟಿಕೊಂಡ ಬಡ ಫಲಾನುಭವಿಗಳಿಗೆ ಸರ್ಕಾರದಿಂದ ಬರಬೇಕಾದ ಅನುದಾನದ ಬಿಲ್ಲುಗಳನ್ನು ಇಂಜಿನಿಯರ್ ಮತ್ತು ಅಧಿಕಾರಿಗಳು ಸಕಾಲಕ್ಕೆ ಮಂಜೂರು ಮಾಡುತ್ತಿಲ್ಲ. ಸಾಲ ಮಾಡಿ ಮನೆ ನಿರ್ಮಿಸಿಕೊಂಡಿರುವ ಬಡ ಕುಟುಂಬಗಳು ಬಿಲ್ಲುಗಳಿಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದ್ದು, ಸಂಸಾರ ಸಾಗಿಸುವುದೇ ದುಸ್ತರವಾಗಿದೆ. ಬಡವರ ಬದುಕಿಗಾಗಿ ಮನೆಗಳನ್ನು ದುರಸ್ತಿಗೊಳಿಸಿ ನೀರು, ವಿದ್ಯುತ್, ಶೌಚಾಲಯ, ಶಾಲೆ ಹಾಗೂ ಅಂಗನವಾಡಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು. ಜತೆಗೆ ಬಾಕಿ ಇರುವ ಮನೆಗಳ ಬಿಲ್ಲುಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.2021 -22 ನೇ ಸಾಲಿನಲ್ಲಿ ಕೊಳಚೆ ನಿರ್ಮೂಲ ಮಂಡಳಿಯ ಮನೆಗಳ ದುರಸ್ತಿಗೆ 1.50 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಕಾಮಗಾರಿಯ ಗುತ್ತಿಗೆಯನ್ನು ಪಡೆದ ಕೆಲವು ಪುರಸಭೆ ಸದಸ್ಯರು ಕಳಪೆ ಕೆಲಸವನ್ನು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಮೂಲ ಸೌಕರ್ಯ ಕೊಟ್ಟಿಲ್ಲ ಎಂದು ಜೆಡಿಎಸ್ ಮುಖಂಡರು ಆರೋಪಿಸಿದರು.