ಅಧಿಕಾರಿಗಳನ್ನು ಮುತ್ತಿಗೆ ಹಾಕಿ ತರಾಟೆಗೈದ ಕೊಳಗೇರಿ ನಿವಾಸಿಗಳು

KannadaprabhaNewsNetwork |  
Published : Jul 21, 2025, 01:30 AM IST
18ಎಚ್.ಎಲ್.ವೈ-1: ವಸತಿ ಯೋಜನೆ ಕಾಮಗಾರಿ ವೀಕ್ಷಣೆಗೆ ಬಂದ ಕೊಳಗೇರಿ ಮಂಡಳಿ ಅಧಿಕಾರಿಗಳ ನಿಯೋಗಕ್ಕೆ ಕೊಳಗೇರಿ ನಿವಾಸಿಗಳು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. | Kannada Prabha

ಸಾರಾಂಶ

ಪಟ್ಟಣದಲ್ಲಿನ ಇತರ ಕೊಳಗೇರಿ ಪ್ರದೇಶಗಳಿಗೆ ಏಕೆ ಭೇಟಿ ನೀಡುತ್ತಿಲ್ಲ

ಹಳಿಯಾಳ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಕೊಳಚೆ ಪ್ರದೇಶದ ನಿವಾಸಿಗಳಿಗಾಗಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಕಳಪೆಯಾಗಿರುವ ಬಗ್ಗೆ ಕೊಳಗೇರಿ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಶುಕ್ರವಾರ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ನಿಯೋಗವು ಹಳಿಯಾಳಕ್ಕೆ ಆಗಮಿಸಿದೆ.

ಎರಡು ದಿನ ಹಳಿಯಾಳದಲ್ಲಿ ವಾಸ್ತವ್ಯ ಮಾಡುವ ಅಧಿಕಾರಿಗಳ ನಿಯೋಗವು ಪಟ್ಟಣದಲ್ಲಿನ ವಿವಿಧ ಕೊಳಗೇರಿಗಳಲ್ಲಿ ನಿರ್ಮಿಸಿರುವ ಮನೆಗಳ ಪರಿಶೀಲನೆ ಮಾಡಲಿದ್ದು, ಫಲಾನುಭವಿಗಳ ಅಹವಾಲು ಆಲಿಸಲಿದೆ.

ಕೊಳಗೇರಿ ನಿವಾಸಿಗಳಿಂದ ಮುತ್ತಿಗೆ:

ಪಟ್ಟಣದ ಹೊಸುರ ಓಣಿಯಲ್ಲಿ ನಿರ್ಮಿಸಲ್ಪಟ್ಟ ಮನೆಗಳ ವೀಕ್ಷಣೆಗೆ ತೆರಳಿದ ಅಧಿಕಾರಿಗಳನ್ನು ಯಲ್ಲಾಪುರ ನಾಕೆಯ ಕೊಳಗೇರಿ ನಿವಾಸಿಗಳು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಪ್ರತಿ ಬಾರಿಯೂ ಬಂದಾಗ ಕೇವಲ ಹೊಸುರ ಓಣಿಗೆ ಮಾತ್ರ ಭೇಟಿ ನೀಡಿ ಹೋಗುತ್ತಿರುವ ಬಗ್ಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.

ಪಟ್ಟಣದಲ್ಲಿನ ಇತರ ಕೊಳಗೇರಿ ಪ್ರದೇಶಗಳಿಗೆ ಏಕೆ ಭೇಟಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಹಲವಾರು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಮಂಡಳಿಯನ್ನು ನಂಬಿ ಮನೆ ನಿರ್ಮಾಣ ಆರಂಭಿಸಿದವರು ಬೀದಿಗೆ ಬಿದ್ದಿದ್ದಾರೆ. ಬದುಕು ಅತಂತ್ರವಾಗಿದೆ. ಗುತ್ತಿಗೆದಾರರು ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗೆ ನೂರಾರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿದರು. ಇದಕ್ಕೆ ಸಮಜಾಯಿಷಿ ನೀಡಲು ಅಧಿಕಾರಿಗಳು ಮುಂದಾದರೂ ಕೊಳಗೇರಿ ನಿವಾಸಿಗಳು ಒಪ್ಪಲಿಲ್ಲ. ಮೊದಲು ಯಲ್ಲಾಪುರ ನಾಕೆಯ ಕೊಳಗೇರಿ ಪ್ರದೇಶ ಭೇಟಿ ನೀಡುವಂತೆ ಪಟ್ಟು ಹಿಡಿದರು. ಕೊಳಗೇರಿ ನಿವಾಸಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಹೊಸುರ ಗಲ್ಲಿಯ ಭೇಟಿ ಮೊಟಕುಗೊಳಿಸಿ ಯಲ್ಲಾಪುರ ನಾಕೆಯ ಕೊಳಗೇರಿ ಪ್ರದೇಶದತ್ತ ತೆರಳಿ ನಿರ್ಮಾಣಗೊಂಡ ಹಾಗೂ ಅರ್ಧಕ್ಕೆ ನಿಂತಿರುವ ಮನೆಗಳ ವೀಕ್ಷಣೆ ಮಾಡಿ, ಅಹವಾಲು ಆಲಿಸಿದರು.

ಶಾಸಕರ ಹೆಸರಿಗೆ ಮಸಿ ಬಳಿಯಬೇಡಿ:

ಕಾಂಗ್ರೆಸ್ ಮುಖಂಡ ಮಾರುತಿ ಕಲಬಾವಿ ಅಧಿಕಾರಿಗಳೊಂದಿಗೆ ಮಾತನಾಡಿ, ಶಾಸಕ ಆರ್.ವಿ. ದೇಶಪಾಂಡೆ ವಿಶೇಷ ಪ್ರಯತ್ನದಿಂದ ಕೊಳಗೇರಿ ನಿವಾಸಿಗಳಿಗೆ ಜಮೀನು ಹಕ್ಕುಪತ್ರ ದೊರೆತಿದೆ. ಶಾಸಕರೇ ಕೊಳಗೇರಿ ನಿವಾಸಿಗಳಿಗೆ ವಸತಿ ನಿರ್ಮಾಣದ ಯೋಜನೆ ಮಂಜೂರು ಮಾಡಿ ತಂದಿದ್ದಾರೆ. ಹೀಗಿರುವಾಗ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಮನೆಗಳ ನಿರ್ಮಾಣ ಮಾಡಬೇಕು. ನಿಮ್ಮ ನಿರ್ಲಕ್ಷ್ಯದಿಂದ ಇಂದು ನಮ್ಮ ಸರ್ಕಾರಕ್ಕೆ ಹಾಗೂ ಶಾಸಕರು ಹೆಸರಿಗೆ ಕಳಂಕ ಬರುತ್ತಿದೆ ಎಂದರು.

ಕಾಂಗ್ರೆಸ್ ಮುಖಂಡ ಮಾರುತಿ ಕಲಬಾವಿ, ಬಿಜೆಪಿ ಪ್ರಮುಖ ಕುಮಾರ ಕಲಬಾವಿ, ಕೊಳಗೇರಿಯ ಪ್ರಕಾಶ ಗೌಡಪ್ಪನವರ, ಅಬ್ದುಲ ದುರ್ಗಾಡಿ, ಇರ್ಪಾನ್ಪ ಬುಡ್ಡೆಸಾಬನವರ, ಮಂಜುನಾಥ ಚಲವಾದಿ, ರಹೆಮಾನ ಜಂಬೂವಾಲೆ ಇದ್ದರು.

ಅಧಿಕಾರಿಗಳ ನಿಯೋಗದಲ್ಲಿ ಕೊಳಗೇರಿ ಮಂಡಳಿಯ ಹಿರಿಯ ಅಧಿಕಾರಿ ಪ್ರತೀಕ ದಳವಾಯಿ, ರಾಜಶೇಖರ ಚವ್ಹಾನ, ಶಿವಮೊಗ್ಗ ವಿಭಾಗದ ಅಧಿಕಾರಿ ಪ್ರಸನ್ನ, ಬೆಂಗಳೂರು ತಾಂತ್ರಿಕ ಶಾಖೆಯ ದಯಾನಂದ ಪಿ ಇದ್ದರು.

ಹಳಿಯಾಳ ಪಟ್ಟಣಕ್ಕೆ ಕೊಳಗೇರಿ ಮಂಡಳಿಯಿಂದ 661 ಮನೆಗಳು ಮಂಜೂರಾಗಿದ್ದು, ಅದರಲ್ಲಿ 400 ಮನೆಗಳ ಪೂರ್ಣಗೊಂಡಿವೆ. ಕಾರಣಾಂತರದಿಂದ ಅನುದಾನ ಬಿಡುಗಡೆಯಾಗಲಿಲ್ಲ. ಶಾಸಕ ದೇಶಪಾಂಡೆ ಸೂಚಿಸಿದಂತೆ ನಮ್ಮ ನಿಯೋಗವು ಮನೆಗಳ ನಿರ್ಮಾಣದ ಹಂತ ಇತ್ಯಾದಿ ಪರಿಶೀಲಿಸಿ ವರದಿ ಸಿದ್ಧಪಡಿಸುತ್ತಿದ್ದೇವೆ. ಪ್ರತೀಕ ದಳವಾಯಿ, ಕೊಳಗೇರಿ ಮಂಡಳಿ ಎಇಇ.

PREV

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ