ಸ್ಲಂ ವಾಸಿಗಳಿಗೆ ಹಕ್ಕೂ ಇಲ್ಲ, ಪತ್ರವೂ ಇಲ್ಲ

KannadaprabhaNewsNetwork |  
Published : Dec 06, 2024, 08:59 AM IST
5ಎಚ್‌1 ಹೆಗ್ಗೇರಿಯ ಸಮೀಪದಲ್ಲಿನ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ.5ಎಚ್‌2 ಹೆಗ್ಗೇರಿಯ ಸಮೀಪದಲ್ಲಿನ ಖಾಲಿ ಜಾಗದಲ್ಲಿ ತ್ಯಾಜ್ಯದಿಂದ ದುರ್ನಾತ ಉಂಟಾಗಿರುವುದು. | Kannada Prabha

ಸಾರಾಂಶ

ಕೆಲವು ಕೊಳಗೇರಿ ಪ್ರದೇಶಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿಯಲ್ಲಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಇನ್ನೂ ಕಗ್ಗಾಂಟಾಗಿಯೇ ಉಳಿದಿದೆ. ಕೆಲವೆಡೆ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲವಾಗಿದೆ.

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ:

ನಗರದ ಘೋಷಿತ ಬಹುತೇಕ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರದ ಭಾಗ್ಯ ಸಿಕ್ಕಿಲ್ಲ. ಆದ್ದರಿಂದ ಇವರ ಸ್ವಂತ ಸೂರಿನ ಕನಸು ನನಸಾಗಿಲ್ಲ. ಇದರಿಂದ ಕೊಳಗೇರಿ ನಿವಾಸಿಗಳು ಭೂಮಿಯ ಮಾಲೀಕತ್ವದ ಹಕ್ಕು ಹಾಗೂ ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆ.

ಕೆಲವು ಕೊಳಗೇರಿ ಪ್ರದೇಶಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿಯಲ್ಲಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಇನ್ನೂ ಕಗ್ಗಾಂಟಾಗಿಯೇ ಉಳಿದಿದೆ. ಕೆಲವೆಡೆ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲವಾಗಿದೆ.

ಸ್ಲಂ ಕಾಯಿದೆ 27/3ರ ಅನ್ವಯ ರಾಜ್ಯದ ಎಲ್ಲ ಸರ್ಕಾರಿ ಜಾಗಗಳಲ್ಲಿರುವ ಕೊಳಚೆ ಪ್ರದೇಶಗಳನ್ನು ಮಂಡಳಿಗೆ ವರ್ಗಾವಣೆ ಮಾಡಿ ಭೂಮಾಲೀಕತ್ವ ನೀಡಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ತನ್ನ ಜಾಗದಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರ ನೀಡುತ್ತಿದೆ. ಮಹಾನಗರ ಪಾಲಿಕೆ ಜಾಗದಲ್ಲಿರುವ ಕೊಳಗೇರಿಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡುತ್ತಿಲ್ಲ. ಇದರಿಂದ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹಕ್ಕುಪತ್ರ ಎಂದರೇನು:

ಒಬ್ಬ ವ್ಯಕ್ತಿಯು ಆಸ್ತಿಯನ್ನು ಹೊಂದಿದ್ದರೂ ಮಾಲೀಕತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲದಂತಹ ಬಹಳಷ್ಟು ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಮೂರನೇ ವ್ಯಕ್ತಿ ಆಸ್ತಿಯನ್ನು ಆಕ್ರಮಿಸಲು ಮತ್ತು ಕಾನೂನುಬಾಹಿರವಾಗಿ ಮಾಲೀಕತ್ವವನ್ನು ಪಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿಯು ಹದಗೆಡುತ್ತದೆ. ಇಲ್ಲಿ ಹಕ್ಕು ಪತ್ರದಂತಹ ಕಾನೂನು ದಾಖಲೆಯು ಕಾರ್ಯರೂಪಕ್ಕೆ ಬರುತ್ತದೆ.

ಹಕ್ಕುಪತ್ರವು ಒಂದು ಕಾನೂನು ದಾಖಲೆಯಾಗಿದ್ದು, ಅದು ಒಬ್ಬ ವ್ಯಕ್ತಿಯ ಆಸ್ತಿಯ ಹಕ್ಕಿನ ಉತ್ತರಾಧಿಕಾರವನ್ನು ತಿಳಿಸುತ್ತದೆ. ಇದನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ನಗರ ಕೊಳಗೇರಿ ನಿವಾಸಿಗಳು, ಅಂಗವಿಕಲರು ಮತ್ತು ಇತರ ಅನನುಕೂಲಕರ ಜನಸಂಖ್ಯೆಯನ್ನು ಒಳಗೊಂಡಂತೆ ಹಿಂದುಳಿದ ವರ್ಗಕ್ಕೆ ನೀಡಲಾಗುತ್ತದೆ.

ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ನಗರದ ಭೂಮಿಯನ್ನು ಮತ್ತು ನಿವೇಶನಗಳನ್ನು ಮೀಸಲಿಡುವ ಭೂ ಬ್ಯಾಂಕ್ ನೀತಿಯನ್ನು ಜಾರಿಗೆ ತಂದು ನಿವೇಶನ ರಹಿತರ ಸಮಸ್ಯೆ ಹೋಗಲಾಡಿಸಬೇಕು. ಸ್ಲಂ ಜನರಿಗೆ ವರದಾನವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಹಾಗೂ ವಿಲೀನಗೊಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಗಿರಣಿಚಾಳ, ವೀರಮಾರುತಿನಗರ, ಯಾವಗಲ್‌ ಪ್ಲಾಟ್‌, ಬೆಂಗೇರಿ, ಹೆಗ್ಗೇರಿಯ ಮಾರುತಿ ನಗರ ಸೇರಿದಂತೆ ಅನೇಕ ಕಡೆಗಳ ನೂರಾರು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ.

ಕೆಲವೆಡೆ ಪಾಲಿಕೆಯಿಂದ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಆದರೆ ಇನ್ನು ಕೆಲವು ಕಡೆ ನಿರ್ಲಕ್ಷ್ಯ ವಹಿಸಲಾಗಿದೆ. ಗಿರಣಿಚಾಳದ ನಿವಾಸಿಗಳು ಕಳೆದ 25 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಆಡಳಿತ ವ್ಯವಸ್ಥೆ ಸೂಕ್ತ ಸ್ಪಂದನೆ ನೀಡಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಒಟ್ಟು 126 ಮನೆಗಳು ಮಂಜೂರಾದರೂ ಕಾಮಗಾರಿ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಇದರಿಂದ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ.

ಸಮಸ್ಯೆಗಳ ಸರಮಾಲೆಯೊಂದಿಗೆ ಜೀವನ:

ಇದೇ ಭಾಗದಿಂದ ಶಾಸಕರಾಗಿದ್ದ ಜಗದೀಶ ಶೆಟ್ಟರ ಮುಖ್ಯಮಂತ್ರಿಗಳಾಗಿದ್ದರು. ಇಲ್ಲಿಯೇ ಓದಿ ಬೆಳೆದಿದ್ದ ಶಂಕರ ಪಾಟೀಲ ಮುನೇನಕೊಪ್ಪ ಸಚಿವರಾಗಿದ್ದರು. ಈಗ ಇದೇ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇಲ್ಲಿಯ ಅಭಿವೃದ್ಧಿ, ಬೇಡಿಕೆ ಮಾತ್ರ ಈಡೇರುತ್ತಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸ್ಲಂ ನಿವಾಸಿಗಳು ಸಮಸ್ಯೆಗಳ ಸರಮಾಲೆಯೊಂದಿಗೆ ಜೀವನ ನಡೆಸಬೇಕಾಗಿದೆ.

ಹಕ್ಕುಪತ್ರ ನೀಡುವಂತೆ ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಶಾಸಕರು, ಕೊಳಗೇರಿ ಮಂಡಳಿಯ ಅಧ್ಯಕ್ಷರು, ಸಚಿವರು, ಅನೇಕ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಸೂಕ್ತ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಿವಾಸಿಗಳ ಸಭೆ ನಡೆಸಿ

ಹೋರಾಟದ ಕುರಿತು ತೀರ್ಮಾನ ಮಾಡಲಾಗುವುದು ಎನ್ನುತ್ತಾರೆ ಸಮಸ್ತ ಗಿರಣಿಚಾಳ ನಿವಾಸಿಗಳ ಸಂಘದ ಪದಾಧಿಕಾರಿಗಳು.

ಕೇವಲ ಪರಿಚಯ ಪತ್ರ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಕೊಳಗೇರಿ ನಿವಾಸಿಗಳ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕೂಡಲೇ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಹೇಳಿದರು.

ಮೂಲಭೂತ ಸೌಲಭ್ಯ ಒದಗಿಸಿ

ಕೊಳಚೆ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ, ಅಭಿವೃದ್ಧಿಪಡಿಸಬೇಕು. ಸ್ಲಂ ನಿವಾಸಿಗಳು ನಿವೇಶನ ಹೊಂದಿದ್ದಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅವರಿಗೆ ಮನೆ ಮಂಜೂರಾತಿ ನೀಡಬೇಕು. ಸ್ಲಂಗಳಲ್ಲಿ ವಾಸಿಸುವ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಲೇಬರ್‌ ಕಾರ್ಡ್‌ ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವ ಕಾರ್ಯವನ್ನು ಸಂಬಂಧಿತ ಇಲಾಖೆಗಳು ನಿರ್ವಹಿಸಬೇಕು. ಅಲ್ಲದೇ, ಸ್ಲಂ ವಾಸಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕಿಸಲು ಇಲಾಖಾ ಅಧಿಕಾರಿಗಳು ಕೆಲಸ ಮಾಡಬೇಕೆಂದು ಇಲ್ಲಿನ ಸ್ಲಂ ನಿವಾಸಿಗಳು ಒತ್ತಾಯಿಸಿದ್ದಾರೆ.ಬಾಗಿಲು ಮುಚ್ಚಿದೆ.5ಎಚ್‌2 ಹೆಗ್ಗೇರಿಯ ಸಮೀಪದಲ್ಲಿನ ಖಾಲಿ ಜಾಗದಲ್ಲಿ ತ್ಯಾಜ್ಯದಿಂದ ದುರ್ನಾತ ಉಂಟಾಗಿರುವುದು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ