ಕನ್ನಡಪ್ರಭ ವಾರ್ತೆ, ತುಮಕೂರುಯಾರ ಬಗ್ಗೆಯೂ ಅಸೂಯೆ ಹೊಂದದ ಯಾರನ್ನೂ ದ್ವೇಷಿಸದ, ಯಾರೊಬ್ಬರನ್ನೂ ಟೀಕೆ ಮಾಡದ ಅಜಾತಶತ್ರು ಎಸ್.ಎಂ.ಕೃಷ್ಣ. ಜಾತಿಯತೆಯ ದುರ್ಬುದ್ಧಿ ಹೊಂದಿರದ ಅವರು ಈ ರಾಜ್ಯ ಕಂಡ ಅತ್ಯಂತ ಮೇಧಾವಿ, ಮುತ್ಸದ್ದಿ ರಾಜಕಾರಣಿ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಬಣ್ಣಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಮಿತ್ರಪಕ್ಷಗಳು ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ, ಅಗಲಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಎಸ್.ಎಂ.ಕೃಷ್ಣ ಅವರು ಸುಶಿಕ್ಷಿತ, ಬುದ್ಧಿವಂತ ರಾಜಕಾರಣಿ, ಯಾರನ್ನೂ ದ್ವೇಷ ಮಾಡಿದೆ, ತಮ್ಮನ್ನು ಟೀಕಿಸಿದವರನ್ನೂ ವಿಶ್ವಾಸದಿಂದ ಕಾಣುತಿದ್ದ ಅಪರೂಪದ ನಾಯಕ. ವಿರೋಧ ಪಕ್ಷದವರನ್ನೂ ಅತ್ಯಂತ ಆತ್ಮೀಯವಾಗಿ ಕಂಡು ಸ್ಪಂದಿಸಿದವರು ಎಂದರು.ಎಸ್.ಎಂ.ಕೃಷ್ಣ ಅವರೊಂದಿಗಿನ ತಮ್ಮ ಸುದೀರ್ಘ ಅವಧಿಯ ಒಡನಾಟ ನೆನಪಿಸಿಕೊಂಡ ಜಿ.ಎಸ್.ಬಸವರಾಜು, ಕೃಷ್ಣ ಅವರ ಆಪ್ತರ ಬಳಗದಲ್ಲಿ ನಾನೂ ಒಬ್ಬನಾಗಿದ್ದೆ. ಬೆಂಗಳೂರು ನಗರ ಸಾಫ್ಟ್ ವೇರ್ ನಗರವಾಗಿ ಜಗತ್ತಿನಲ್ಲಿ ಹೆಸರಾಗಲು ಎಸ್.ಎಂ.ಕೃಷ್ಣ ಅವರ ದೂರದೃಷ್ಠಿ ಚಿಂತನೆಯೇ ಕಾರಣ, ಅವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ಜಿಲ್ಲೆಗೆ 43 ಬಾರಿ ಆಗಮಿಸಿದ್ದರು ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ನಾಡಿನ ಮುತ್ಸದ್ದಿ ಜನಪರ ಕಾಳಜಿಯ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಕಾಸಸೌಧ ನಿರ್ಮಾಣಕ್ಕೆ ಇವರು ಕಾರಣರಾಗಿದ್ದರು. ಐಟಿಬಿಟಿ ಕಂಪನಿಗಳನ್ನು ಆಹ್ವಾನಿಸಿ ಬೆಂಗಳೂರು ಸಿಲಿಕಾನ್ ನಗರವಾಗಿ ಪ್ರಸಿದ್ಧಿಯಾಗಲು ಇವರ ಕೊಡುಗೆ ಇದೆ. ಬೆಂಗಳೂರಿನ ಮೆಟ್ರೋ ಯೋಜನೆಗೆ ನಾಂದಿ ಹಾಡಿದ ಎಸ್.ಎಂ.ಕೃಷ್ಣ ಅವರು ದೂರದೃಷ್ಟಿ ಚಿಂತನೆಯ ನಾಯಕರಾಗಿದ್ದರು. ಇವರ ಅಗಲಿಕೆಯಿಂದ ನಾಡಿಗೆ ಅಪಾರವಾದ ನಷ್ಟವಾಗಿದೆ ಎಂದರು.ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಗುಬ್ಬಿ ನಂಜೇಗೌಡ, ಸಾಗರನಹಳ್ಳಿ ವಿಜಯಕುಮಾರ್, ಚಂದ್ರಶೇಖರ ಬಾಬು, ಟಿ.ಎಚ್.ಹನುಮಂತರಾಜು, ಬಾವಿಕಟ್ಟೆ ನಾಗಣ್ಣ, ಎಚ್.ಎಂ.ರವೀಶಯ್ಯ, ಬೆಳ್ಳಿ ಲೋಕೇಶ್, ಸತ್ಯಮಂಗಲ ಜಗದೀಶ್, ವೆಂಕಟೇಶಾಚಾರ್, ಶಬ್ಬೀರ್ ಅಹ್ಮದ್, ಜೆಡಿಸ್ ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಯೋಗಾನಂದಕುಮಾರ್, ವಿಜಯ್‌ಗೌಡ, ಕೆಂಪರಾಜು, ಟಿ.ಎಲ್.ಕುಂಭಯ್ಯ, ಗಂಗಹನುಮಯ್ಯ, ಹೆಚ್.ಡಿ.ಕೆ.ಮಂಜುನಾಥ್, ನರಸೇಗೌಡ, ಗಣೇಶ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ಕೆ.ಪಿ.ಮಹೇಶ್, ಮುಖಂಡರಾದ ಸಿ.ಎನ್.ರಮೇಶ್, ಬನಶಂಕರಿಬಾಬು, ಕೆ.ಪಿ.ಮಮತ, ತಾಹೇರಾ ಕುಲ್ಸಂ, ಲಕ್ಷ್ಮಮ್ಮ, ವಿಜಯ, ಗಾಯತ್ರಿ, ವರಲಕ್ಷ್ಮಿ, ಉದಯಲಕ್ಷ್ಮಿ, ಶಿವಕುಮಾರ್, ಹನುಮಂತರಾಜು ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.