ಸ್ಮಾರ್ಟ್‌ ಹೆಲ್ತ್‌ ಕೇರ್‌ ಹಗರಣಕ್ಕೆ ಎಳ್ಳುನೀರು!

KannadaprabhaNewsNetwork |  
Published : Oct 17, 2025, 01:02 AM IST
446 | Kannada Prabha

ಸಾರಾಂಶ

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ತಿಪ್ಪಣ್ಣ ಮಜ್ಜಗಿ ಅವ್ಯವಹಾರವನ್ನು ಹೊರಗೆಳೆದಿದ್ದರು. ಆಗ ಮೇಯರ್‌ ಆಗಿದ್ದ ರಾಮಪ್ಪ ಬಡಿಗೇರ್‌ ಇದಕ್ಕಾಗಿ ಹಿರಿಯ ಸದಸ್ಯ ವೀರಣ್ಣ ಸವಡಿ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿ "ಸ್ಮಾರ್ಟ್‌ಹೆಲ್ತ್‌ ಕೇರ್‌ " ಹೆಸರಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಮಹಾನಗರ ಪಾಲಿಕೆ ಎಳ್ಳುನೀರು ಬಿಟ್ಟಿದೆಯೇ? ಅಥವಾ ಅವ್ಯವಹಾರವಾಗಿರುವುದನ್ನು ಮುಚ್ಚಿಹಾಕಿದೆಯೇ?.

ಇಂತಹದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆಗಿರುವ ಅವ್ಯವಹಾರದ ಬಗ್ಗೆ ಮಹಾನಗರ ಪಾಲಿಕೆ ರಚಿಸಿದ್ದ ಸದನ ಸಮಿತಿ ವರದಿಯನ್ನೂ ಕೊಟ್ಟಿಲ್ಲ. ಆಡಳಿತ ಮಂಡಳಿ ಆಗಲಿ, ವಿರೋಧ ಪಕ್ಷವಾಗಲಿ ಚಕಾರವನ್ನೂ ಎತ್ತುತ್ತಿಲ್ಲ.

ಆಗಿರುವುದೇನು?:

ಪಾಲಿಕೆ ಆಧೀನದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ ಹೆಲ್ತ್‌ ಕೇರ್‌ ಎಂಬ ಯೋಜನೆಯನ್ನು 2019ರಲ್ಲೇ ಜಾರಿಗೊಳಿಸಿತ್ತು. ಆಸ್ಪತ್ರೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಜಾರಿಗೊಳಿಸುವ ವ್ಯವಸ್ಥೆಯಿದು. ಆದರೆ, ಇದು ಬರೀ ಕಾಗದದಲ್ಲೇ ಮಾತ್ರ ಉಳಿದಿದೆ. ಈ ಮಷಿನ್ ಖರೀದಿಗೆ ₹ 3 ಕೋಟಿಯನ್ನು ಸ್ಮಾರ್ಟ್‌ಸಿಟಿ ವ್ಯಯಿಸಿದ್ದು ಇದರ ನಿರ್ವಹಣೆಗೆ ಪಾಲಿಕೆಯಿಂದ ₹ 1.5 ಕೋಟಿ ವೆಚ್ಚವಾಗಿದೆ. ಅಸಲಿಗೆ ಈ ಮಷಿನ್ ಅಳವಡಿಕೆಯಾದ ಬಳಿಕ ಒಂದೇ ಒಂದು ದಿನವೂ ಕಾರ್ಯನಿರ್ವಹಿಸಿಲ್ಲ.

ಏನಿದರ ವಿಶೇಷ?:ಇಲ್ಲಿ ಬರುವ ರೋಗಿ ಮೊದಲು ಡಿಜಿಟಲ್ ನೋಂದಣಿ ಮಾಡಿಸಬೇಕು. ಅದು ಸಂಬಂಧಿತ ವೈದ್ಯರಿಗೆ ಡಿಜಿಟಲ್ ಮೂಲಕ ರವಾನೆಯಾಗುತ್ತದೆ. ವೈದ್ಯರು ರೋಗಿ ತಪಾಸಣೆ ಮಾಡಿದ ಬಳಿಕ ಔಷಧಿ, ವಿವಿಧ ತಪಾಸಣೆಯನ್ನು ಕಂಪ್ಯೂಟರ್ ಮೂಲಕವೇ ಸೂಚಿಸಬೇಕಾಗುತ್ತದೆ. ಔಷಧಿಯೂ ನೋಂದಣಿ ಪತ್ರದ ಮೇಲಿರುವಂಥ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣವೇ ವೆಂಡಿಂಗ್ ಮಷಿನ್ ಮೂಲಕ ಪಡೆಯಬಹುದಾಗಿದೆ. ಒಂದು ಸಲ ಒಬ್ಬ ರೋಗಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆದ ಮೇಲೆ ಆತನ ಸಮಗ್ರ ಮಾಹಿತಿ ಈ ವ್ಯವಸ್ಥೆಯಲ್ಲಿ ಸದಾಕಾಲ ಇರುತ್ತದೆ. ಆತ ಮತ್ತೊಮ್ಮೆ ಆಸ್ಪತ್ರೆಗೆ ಬಂದರೆ ನೋಂದಣಿ ಮಾಡಿಸುವ ಅಗತ್ಯ ಬೀಳುವುದಿಲ್ಲ. ಆತನ ನೋಂದಣಿ ಸಂಖ್ಯೆ ಹೇಳಿದರೆ ಕಂಪ್ಯೂಟರ್ ಸ್ಕ್ರೀನ್ ಮೇಲೆ ಸಮಗ್ರ ಮಾಹಿತಿ ಥಟ್ಟನೇ ಬರುತ್ತದೆ. ರೋಗಿಗೆ ಬೇರೆ ಊರಲ್ಲಿರುವ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಿದ್ದರೂ ಅದನ್ನು ಕೂಡ ಇಲ್ಲೇ ಕುಳಿತು ವರ್ಚುವಲ್ ಆಗಿ ಪಡೆದುಕೊಳ್ಳಬಹುದಾಗಿದೆ. ಹೀಗೆ ಪ್ರತಿಯೊಂದು ಅತ್ಯಾಧುನಿಕ ಸೌಲಭ್ಯಗಳು ಇಲ್ಲಿ ಲಭ್ಯವಾಗುತ್ತವೆ ಎಂದು ಹೇಳಲಾಗಿತ್ತು. ಒಪಿಡಿ, ಐಪಿಡಿ ಎಲ್ಲ ರೋಗಿಗಳ ಸಮಗ್ರ ಮಾಹಿತಿ ಇಲ್ಲಿರಬೇಕು. ಇದ್ಯಾವುದು ಈಗ ಅಲ್ಲಿ ಆಗುತ್ತಿಲ್ಲ.

2019ರಲ್ಲಿ ಜಾರಿಗೊಳಿಸಲಾಗಿದ್ದ ಈ ವ್ಯವಸ್ಥೆಗೆ ಬರೋಬ್ಬರಿ 5 ವರ್ಷ ಖಾಸಗಿ ಏಜೆನ್ಸಿಯೊಂದು ನಿರ್ವಹಣೆ ಮಾಡಬೇಕಿತ್ತು. ವರ್ಷಕ್ಕೆ ₹ 30 ಲಕ್ಷದಂತೆ 5 ವರ್ಷಕ್ಕೆ ₹ 1.5 ಕೋಟಿ ಆ ಏಜೆನ್ಸಿಗೆ ಹೋಗಿದೆ. ಏಜೆನ್ಸಿ ಅವಧಿಯೂ ಮುಕ್ತಾಯವಾಗಿದ್ದು, ಅದು ತನ್ನ ಪಾಲಿನ ಹಣ ಪಡೆದುಕೊಂಡು ಹೋಗಿದೆ. ಹೀಗೆ ಬರೋಬ್ಬರಿ ₹ 1.5 ಕೋಟಿ ಅವ್ಯವಹಾರವಾಗಿತ್ತು.

ಕಾಟಾಚಾರದ ಸದನ ಸಮಿತಿ:ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ತಿಪ್ಪಣ್ಣ ಮಜ್ಜಗಿ ಅವ್ಯವಹಾರವನ್ನು ಹೊರಗೆಳೆದಿದ್ದರು. ಆಗ ಮೇಯರ್‌ ಆಗಿದ್ದ ರಾಮಪ್ಪ ಬಡಿಗೇರ್‌ ಇದಕ್ಕಾಗಿ ಹಿರಿಯ ಸದಸ್ಯ ವೀರಣ್ಣ ಸವಡಿ ನೇತೃತ್ವದಲ್ಲಿ ಸದನ ಸಮಿತಿ ರಚಿಸಿದ್ದರು. ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ಆಗಿನ ವಿಪಕ್ಷ ನಾಯಕ ರಾಜಶೇಖರ ಕಮತಿ ಹೀಗೆ ಸಮಿತಿ ಸದಸ್ಯರಾಗಿದ್ದರು. ಸಮಿತಿ ರಚಿಸಿ ಬರೋಬ್ಬರಿ 10 ತಿಂಗಳಿಗೂ ಹೆಚ್ಚು ಕಾಲವೇ ಸಂದಿದೆ. ಸಮಿತಿ ಕೂಡ ಎರಡು ಬಾರಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿತ್ತು.

ಅಷ್ಟರಲ್ಲೇ ಸ್ಮಾರ್ಟ್‌ಸಿಟಿ ಅವಧಿಯೂ ಮುಕ್ತಾಯವಾಯಿತು. ಬೇಕಾದ ಮಾಹಿತಿ ಸಿಕ್ಕಿಲ್ಲವಂತೆ. ಹೀಗಾಗಿ ಪಾಲಿಕೆಗೆ ವರದಿಯನ್ನೇ ಸಲ್ಲಿಸಿಲ್ಲ. ಹಾಗಾದರೆ ಪಾಲಿಕೆ ಪಾವತಿಸಿರುವ ₹ 1.5 ಕೋಟಿ ವಸೂಲಾತಿ ಹೇಗೆ? ಸಾರ್ವಜನಿಕರ ತೆರಿಗೆ ದುಡ್ಡಿಗೆ ಬೆಲೆಯೇ ಇಲ್ಲವೇ? ಸ್ಮಾರ್ಟ್‌ಸಿಟಿ ಯೋಜನೆಯಿಂದಲೂ ಇದಕ್ಕೆ ₹ 3 ಕೋಟಿ ಖರ್ಚು ಮಾಡಿದೆ. ಅದರ ಕಥೆಯೇನು? ಎಂಬೆಲ್ಲ ಪ್ರಶ್ನೆಗಳಿಗೆ ಮಾತ್ರ ಉತ್ತರವೇ ಇಲ್ಲ.

ಸ್ಮಾರ್ಟ್‌ಹೆಲ್ತ್‌ ಕೇರ್‌ ಯೋಜನೆಯಲ್ಲಿ ಆಗಿದ್ದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನನ್ನ ನೇತೃತ್ವದಲ್ಲೇ ಸದನ ಸಮಿತಿ ರಚಿಸಿತ್ತು. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯೇ ಮುಕ್ತಾಯವಾಗಿರುವುದರಿಂದ ಯಾರಿಂದಲೂ ಮಾಹಿತಿ ಸಿಗಲಿಲ್ಲ. ಹೀಗಾಗಿ ವರದಿ ಕೊಟ್ಟಿಲ್ಲ.

ವೀರಣ್ಣ ಸವಡಿ, ಚೇರಮನ್‌, ಸದನ ಸಮಿತಿ

ಸದನ ಸಮಿತಿ ಎರಡು ಬಾರಿ ಸಭೆ ಕರೆದಿತ್ತು. ಎರಡು ಬಾರಿ ಆಸ್ಪತ್ರೆಗೂ ಹೋಗಿ ಪರಿಶೀಲನೆ ಮಾಡಿಕೊಂಡು ಬಂದೇವು. ಅವ್ಯವಹಾರವಾಗಿರುವುದು ಕಂಡು ಬಂತು. ಆದರೆ, ಅಧಿಕಾರಿ ವರ್ಗದಿಂದ ಸರಿಯಾಗಿ ಮಾಹಿತಿ ಸಿಗಲಿಲ್ಲ. ಮುಂದೆ ಸಮಿತಿ ಸಭೆಯನ್ನೇ ಕರೆಯಲಿಲ್ಲ. ಅಷ್ಟಕ್ಕೆ ಉಳಿದಿದೆ.

ಈರೇಶ ಅಂಚಟಗೇರಿ, ಸದಸ್ಯರು ಸದನ ಸಮಿತಿ

ಅವ್ಯವಹಾರ ಅಷ್ಟಕ್ಕೆ ನಿಂತಿದೆ. ಮುಂದೆ ಚೇರಮನ್‌ರು ಸಭೆಯನ್ನೇ ಕರೆದಿಲ್ಲ. ಈ ಸಲ ಮತ್ತೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಕೋಟಿಗಟ್ಟಲೇ ಅವ್ಯವಹಾರವಾಗಿದೆ. ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು.

ರಾಜಶೇಖರ ಕಮತಿ, ಸದಸ್ಯರು, ಸದನ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!