ಪಾಂಚಜನ್ಯ ಯಾತ್ರೆಯಿಂದ ಪಕ್ಷ ಸಂಘಟಿಸಿದ ಎಸ್ಎಂಕೆ

KannadaprabhaNewsNetwork | Published : Dec 12, 2024 12:31 AM

ಸಾರಾಂಶ

ಪಾಂಚಜನ್ಯ ಯಾತ್ರೆ ಮೂಲಕ ರಾಜ್ಯದ ಉದ್ದಗಲಕ್ಕೂಸಂಚರಿಸಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಎಸ್.ಎಂ. ಕೃಷ್ಣ ಅವರ ಶ್ರಮ ಅಪಾರವಾಗಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಫೀರ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪಾಂಚಜನ್ಯ ಯಾತ್ರೆ ಮೂಲಕ ರಾಜ್ಯದ ಉದ್ದಗಲಕ್ಕೂಸಂಚರಿಸಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಎಸ್.ಎಂ. ಕೃಷ್ಣ ಅವರ ಶ್ರಮ ಅಪಾರವಾಗಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಫೀರ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಎಸ್.ಎಂ. ಕೃಷ್ಣರವರ ವ್ಯಕ್ತಿತ್ವ ದೊಡ್ಡದು. ಅವರ ಸಂಘಟನಾ ಚಾತುರ್ಯ ಇಂದಿನ ಕಾರ್ಯಕರ್ತರಿಗೆ ಮಾದರಿಯಾಗಬೇಕೆಂದರು.

ವಿದೇಶದಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿ ಪಡೆದ ಎಸ್.ಎಂ ಕೃಷ್ಣರವರು ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಪ್ರತಿನಿಧಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರಥಮ ಉಪ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಅಗಲಿಕೆ ನೋವು ದೇಶಕ್ಕೆ ನಷ್ಟವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಎಸ್ಎಂಕೆ ರವರ ಕೊಡುಗೆ ಬಹಳಷ್ಟಿದೆ ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಮಾತನಾಡಿ, ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುವಾಗ ಜಾನ್‍ಎಫ್ ಕೆನಡಿಗೆ ಚುನಾವಣಾ ಪ್ರಚಾರ ಮಾಡಿದ್ದ ಎಸ್.ಎಂ. ಕೃಷ್ಣ, ರೈತರು ಅನುಭವಿಸುತ್ತಿದ್ದ ಪಹಣಿ ಸಮಸ್ಯೆಯನ್ನು ಡಿಜಿಟಲ್ ಮಾಡಿ ಸರಳೀಕರಣಗೊಳಿಸಿದರು. ರಾಜಕೀಯ ಜೀವನದ ಕಡೇ ದಿನಗಳಲ್ಲಿ ಅವರ ಮನಸ್ಸು ಕಾಂಗ್ರೆಸ್‍ನಲ್ಲಿತ್ತು. ದೇಹ ಮಾತ್ರ ಬಿಜೆಪಿಯಲ್ಲಿತ್ತೆಂದು ತಿಳಿಸಿದರು.

ಗ್ಯಾರಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಎಸ್.ಎಂ. ಕೃಷ್ಣರವರ ನಿಧನದಿಂದ ದೇಶಕ್ಕೆ ನಷ್ಟವಾಗಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದರು. ಮೋಡ ಬಿತ್ತನೆ ಮಾಡುವುದರ ಮೂಲಕ ಆಮ್ಲ ಮಳೆ ತರಿಸುವ ಪ್ರಯೋಗ ಮಾಡಿದ್ದರು ಶ್ಲಾಘಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಸ್. ಕುಮಾರ್ ಗೌಡ ಮಾತನಾಡಿ, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ, ಐಟಿ, ಬಿಟಿ ಗೆ ಎಸ್.ಎಂ. ಕೃಷ್ಣ ಮೂಲ ಕಾರಣಕರ್ತರು. ಮುಖ್ಯಮಂತ್ರಿಯಾಗಿದ್ದಾಗ ಮೆಟ್ರೋ ರೈಲು, ಕೆಂಪೆಗೌಡ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತೀರ್ಮಾನಿಸಿ ಕಾರ್ಯಗತ ಗೊಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‍ಮೂರ್ತಿ ಮಾತನಾಡಿ, ಒಳ ಮೀಸಲಾತಿಗೆ ಏನಾದರೂ ಜೀವ ಬಂದಿದೆ ಎನ್ನುವುದಾದರೆ ಅದಕ್ಕೆ ಎಸ್.ಎಂ. ಕೃಷ್ಣ ಕಾರಣ. ಅನೇಕ ಹುದ್ದೆಗಳನ್ನು ಅಲಂಕರಿಸಿ ರಾಜ್ಯಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ವರ್ಣರಂಜಿತ, ಸರಳ ವ್ಯಕ್ತಿತ್ವದ ನಾಯಕರೆನಿಸಿಕೊಂಡಿದ್ದರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಟಿ. ವೆಂಕಟೇಶ್ ಮಾತನಾಡಿ, 1998 ರಲ್ಲಿ ಪಾಂಚಜನ್ಯ ಯಾತ್ರೆ ಆರಂಭಿಸಿದ ಎಸ್.ಎಂ. ಕೃಷ್ಣರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು ನೆನಪಿಸಿಕೊಂಡರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ, ಮುದಸಿರ್ ನವಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು. ಲಕ್ಷ್ಮಿಕಾಂತ್, ಸೈಯದ್ ವಲಿಖಾದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ. ಪಾಪಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ ಸಂಪತ್‍ಕುಮಾರ್, ಜಿ.ವಿ. ಮಧುಗೌಡ, ಬಿ. ರಾಜಣ್ಣ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೋಹಿದ್ದಿನ್, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಚಾಂದ್‍ಪೀರ್, ರೇಣುಕಶಿವು, ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಡಿ. ಕುಮಾರ್ ಪಿಳ್ಳೆಕೆರನಹಳ್ಳಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article