ಬಸವರಾಜ ಹಿರೇಮಠ
ಈ ಬಾರಿ ರಾಜ್ಯದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಬೇಗ ಬಂದಿದ್ದು, ರೈತರು ಸಹ ಖುಷಿ ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಮೇ ಅಂತ್ಯದಿಂದ ಬರುತ್ತಿರುವ ಮಳೆ ಜಿಲ್ಲೆಯ ಪೈಕಿ ಧಾರವಾಡ ಸುತ್ತಲು ಈಗಲೂ ನಿಂತಿಲ್ಲ. ಆಗಾಗ ತುಸು ಬಿಸಿಲಿನ ಮುಖ ಕಂಡರೂ ಮಳೆ ಮಾತ್ರ ನಿರಂತರವಾಗಿದೆ. ಎಡೆ ಕುಂಟಿ ಹೊಡೆಯುವುದು, ಕೀಟನಾಶಕ ಸಿಂಪರಣೆ ಸೇರಿದಂತೆ ಯಾವುದೇ ಕೃಷಿ ಚಟುವಟಿಕೆಗಳಿಗೆ ಮಳೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಬಹುತೇಕ ಮುಂಗಾರು ಬೆಳೆಗಳು ಬಸವನ ಹುಳುಗಳ ಹೊಟ್ಟೆ ಸೇರುತ್ತಿದೆ.
ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ, ಅಳ್ನಾವರ ಹೀಗೆ ಧಾರವಾಡ ಹೊರತು ಪಡಿಸಿ ಜಿಲ್ಲೆಯ ವಿವಿಧೆ ಬೆಳೆಗಳ ಬೆಳವಣಿಗೆ ತೃಪ್ತಿಕರವಾಗಿವೆ. ಧಾರವಾಡದಲ್ಲೂ ಇಷ್ಟು ದಿನ ಉತ್ತಮವಾಗಿಯೇ ಇದ್ದ ಬೆಳೆಗಳಿಗೆ ಅದರಲ್ಲೂ ಉದ್ದು, ಶೇಂಗಾ ಬೆಳೆಗಳಿಗೆ ಎರಡು ವಾರಗಳಿಂದ ಈ ಬಸವನ ಹುಳು ಕಾಟ ಜೋರಾಗಿದೆ. ಧಾರವಾಡ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಉದ್ದು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 8755 ಹೆಕ್ಟೇರ್ ಪೈಕಿ ಧಾರವಾಡ ತಾಲೂಕಿನಲ್ಲಿಯೇ 7027 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಇದೆ. ಅದೇ ರೀತಿ 2250 ಹೆಕ್ಟೇರ್ ಶೇಂಗಾ, 13821 ಹೆಸರು ಬೆಳೆಯುತ್ತಿದ್ದು ಈ ಬೆಳೆಗಳನ್ನು ಬಸವನ ಹುಳುಗಳು ತಿಂದು ಹಾಕಿ, ಚಿವುಟಿ ಒಗೆಯುತ್ತಿವೆ.ಮಣ್ಣಿನಲ್ಲಿ ಮರೆಯಾಗುವ ಹುಳು: ಈ ಬಸವನಹುಳುಗಳನ್ನು ನಿಯಂತ್ರಿಸಬೇಕೆಂದರೆ ಕೀಟನಾಶಕ ಸಿಂಪಡಿಸಬೇಕು. ಆದರೆ, ಮಳೆ ನಿರಂತರವಾಗಿ ಬರುತ್ತಿದ್ದು, ಕೀಟನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ರಾತ್ರಿ ಹೊತ್ತು ಬೆಳೆ ನಾಶ ಮಾಡಿ ಹಗಲೊತ್ತಿನಲ್ಲಿ ಮಣ್ಣಿನೊಳಗೆ ಹುದುಗಿರುವ ಬಸವನ ಹುಳುವನ್ನು ಕೂಲಿಯಾಳುಗಳೊಂದಿಗೆ ರೈತರು ಮಣ್ಣಿನಿಂದ ಹೊರ ತೆಗೆದು ನಾಶ ಮಾಡುವ ಸ್ಥಿತಿ ಬಂದಿದೆ.
ಇಳುವರಿಯಲ್ಲಿ ಇಳಿಕೆ: ಉಳಿದ ಬಗೆಯ ಕೀಟಗಳಿದ್ದರೆ ಕೀಟನಾಶಕ ಸಿಂಪರಿಸಿ ನಿಯಂತ್ರಿಸುತ್ತೇವೆ. ಆದರೆ, ಬಸವನ ಹುಳು ಕೀಟನಾಶಕಗಳಿಗೂ ನಿಯಂತ್ರಣ ಆಗುತ್ತಿಲ್ಲ. ಬಸವನಹುಳು ಕಂಡ ಕೂಡಲೇ ರೈತರು ಬೆಚ್ಚಿ ಬೀಳುವಂತಾಗಿದೆ. ಇವುಗಳನ್ನು ಬೇಗ ನಿಯಂತ್ರಿಸದೇ ಇದ್ದರೆ ಬೆಳೆಯ ಇಳುವರಿಯಲ್ಲಿ ಭಾರೀ ಇಳಿಕೆಯಾಗುತ್ತದೆ. ಹೀಗಾಗಿ ಕೂಲಿಯಾಳುಗಳೊಂದಿಗೆ ಹೊಲಕ್ಕೆ ಹೋಗಿ ಒಂದೊಂದಾಗಿ ಹುಳುಗಳನ್ನು ಆರಿಸುತ್ತಿದ್ದೇವೆ. ಅಷ್ಟಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಯಾದವಾಡ ಗ್ರಾಮದ ರೈತ ಅಜ್ಜಪ್ಪ ಕರಿಕಟ್ಟಿ ಬೇಸರ ವ್ಯಕ್ತಪಡಿಸಿದರು.