ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ತಹಸೀಲ್ದಾರ್, ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ಮುಂಡಗೋಡ: ಡಿ. 31ರಂದು ಹಾವು ಕಚ್ಚಿ ಅಂಗನವಾಡಿ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಗುವಿನ ಕುಟುಂಬಸ್ಥರು, ವಿವಿಧ ಮಹಿಳಾ ಸಂಘಟನೆ ಸೇರಿದಂತೆ ಸಾರ್ವಜನಿಕರು ಬುಧವಾರ ಸಂಜೆ ತಾಲೂಕಾಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಹಾವು ಕಚ್ಚಿದ ಮಗುವನ್ನು ೧೦ ನಿಮಿಷದೊಳಗೆ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ತಕ್ಷಣ ಅಗತ್ಯ ಚಿಕಿತ್ಸೆ ನೀಡುವ ಬದಲು ಕೆಲಹೊತ್ತು ಕಾಲಹರಣ ಮಾಡಿ ಕೊನೆ ಕ್ಷಣದಲ್ಲಿ ಹುಬ್ಬಳ್ಳಿ ಕಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಮಗು ಮೃತಪಟ್ಟಿದೆ. ಇದಕ್ಕೆ ಕರ್ತವ್ಯದಲ್ಲಿದ್ದ ವೈದ್ಯರೇ ನೇರ ಹೊಣೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿಕಿತ್ಸೆ ನೀಡುವ ಬದಲು ಹುಬ್ಬಳ್ಳಿ ಕಿಮ್ಸ್ ಹೋಗಿ ಎಂದು ಹೇಳುತ್ತಾರೆ. ಕೆಲ ವೈದ್ಯರು ರೋಗಿಗಳಿಗೆ ಮುಟ್ಟುವುದು ಹೋಗಲಿ, ಸೌಜನ್ಯದಿಂದ ಮಾತನಾಡುವುದಿಲ್ಲ. ಏನೇ ಸಮಸ್ಯೆ ಎಂದು ಹೋದರೂ ರಕ್ತ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ಮಾಡಿಸುವಂತೆ ಚೀಟಿ ಬರೆಯುತ್ತಾರೆ. ಕೆಲ ವೈದ್ಯರು ತಮ್ಮದೇ ಆದ ಖಾಸಗಿ ಆಸ್ಪತ್ರೆ ತೆರೆದಿದ್ದು, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಮ್ಮ ಕ್ಲಿನಿಕ್‌ಗೆ ಬರುವಂತೆ ಸೂಚಿಸಿ ಹಣ ಪೀಕುತ್ತಾರೆ. ಹೀಗಾದರೆ ಕೋಟ್ಯಂತರ ರುಪಾಯಿ ವ್ಯಯಿಸಿ ಸೌಲಭ್ಯ ಕಲ್ಪಿಸಲಾಗಿರುವ ಸರ್ಕಾರಿ ಆಸ್ಪತ್ರೆಯ ಅವಶ್ಯಕತೆ ಏನಿದೆ ಎಂದು ಕಿಡಿಕಾರಿದರು.ಸ್ಥಳಕ್ಕಾಗಮಿಸಿದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ಪರೂಪರಾಣಿ ಪಾಟೀಲ, ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಕರ್ತವ್ಯದಲ್ಲಿದ್ದ ವೈದ್ಯರು, ಮಕ್ಕಳ ತಜ್ಞ ವೈದ್ಯರ ಸಲಹೆ ಪಡೆದು ಹಾವಿನ ವಿಷಕ್ಕೆ ಪ್ರತಿರೋಧಕ ಚಿಕಿತ್ಸೆ ಪ್ರಾರಂಭಿಸಬೇಕಿತ್ತು. ಇದನ್ನು ಮಾಡದೆ ಲೋಪವೆಸಗಿರುವುದು ಕಂಡುಬಂದಿದೆ. ಹಾಗಾಗಿ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಡಾ. ದೀಪಾ ತಂತ್ರಿ ಅವರ ಮೇಲೆ ಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಅಲ್ಲದೆ ಸಾರ್ವಜನಿಕರ ದೂರುಗಳು ಕೇಳಿಬಂದ ಇತರೆ ವೈದ್ಯರ ಬಗ್ಗೆ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ತಹಸೀಲ್ದಾರ್, ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು. ಮಗು ಮೃತಪಟ್ಟ ಅಂಗನವಾಡಿ ಕೇಂದ್ರವನ್ನು ಸದ್ಯ ಬೇರೆ ಕಡೆಗೆ ಸ್ಥಳಾಂತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಮು ಬಯಲುಸೀಮೆ ಅವರಿಗೆ ತಹಸೀಲ್ದಾರರು ಸೂಚಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಮು ಬಯಲುಸೀಮೆ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಮಂಜುನಾಥ ಪಾಟೀಲ, ಬಸವರಾಜ ಠಣಕೆದಾರ, ವಿನಾಯಕ ರಾಯ್ಕ, ತುಕಾರಾಮ ಇಂಗಳೆ, ಭರತರಾಜ ಹದಳಗಿ ಸೇರಿದಂತೆ ವಿವಿಧ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.