ಶಾಲೆಯಲ್ಲಿ ಹಾವು ಪ್ರತ್ಯಕ್ಷ: ಮಕ್ಕಳು ಅಪಾಯದಿಂದ ಪಾರು

KannadaprabhaNewsNetwork |  
Published : Dec 25, 2024, 12:46 AM IST
ಕೆ ಕೆ ಪಿ ಸುದ್ದಿ 01:ಕೋನಮಾನಹಳ್ಳಿ ಸರ್ಕಾರಿ ಶಾಲೆಯ ಅಡುಗೆ ಕೋಣೆಯಲ್ಲಿದ್ದ ಕೇರೆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. | Kannada Prabha

ಸಾರಾಂಶ

ಈ ಅವಾಂತರಕ್ಕೆ ನಮ್ಮ ಗ್ರಾಪಂ ಅಧಿಕಾರಿಗಳೇ ಕಾರಣವಾಗಿದ್ದು, ಅಡುಗೆ ಕೋಣೆಯಲ್ಲಿ ನಲ್ಲಿ ಪೈಪ್ ಅಳವಡಿಸಲು ಗೋಡೆ ಕೊರೆದು ಅದನ್ನು ಮುಚ್ಚದೆ ಹಾಗೆ ಬಿಟ್ಟಿರುವ ಕಾರಣ ಹಾವು ಪ್ರವೇಶ ಮಾಡಿದೆ, ನಲ್ಲಿ ಅಳವಡಿಸಲು ಕೊರೆದಿದ್ದ ಜಾಗವನ್ನು ಮುಚ್ಚುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕನ್ನಡಪ್ರಭ ವಾರ್ತೆ ಕನಕಪುರ

ಕೋನಮಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಾವು ಪ್ರತ್ಯಕ್ಷವಾಗಿದ್ದು ಮಕ್ಕಳು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ಹಳ್ಳಿ ಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಮಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಘಟನೆ ಜರುಗಿದೆ.

ಸೋಮವಾರ ಶಾಲೆಯ ಆವರಣದಲ್ಲಿರುವ ಅಡುಗೆ ಕೋಣೆಯಲ್ಲಿ ತಟ್ಟೆ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹೋದಾಗ ಬುಸುಗುಡುವ ಶಬ್ದ ಕೇಳಿ ಬಂದಿದೆ. ಆಗ 7 ಅಡಿ ಉದ್ದದ ಕೇರೆ ಹಾವನ್ನು ಕಂಡು ವಿದ್ಯಾರ್ಥಿಗಳು ಭಯದಿಂದ ಕೋಣೆಯಿಂದ ಓಡಿ ಬಂದಿದ್ದು, ತಕ್ಷಣ ಶಿಕ್ಷಕರು ಮತ್ತು ಎಸ್ ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ ಅವರು ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಉರಗ ತಜ್ಞ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಕೇರೆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ಶಾಲೆಯ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಈ ಅವಾಂತರಕ್ಕೆ ನಮ್ಮ ಗ್ರಾಪಂ ಅಧಿಕಾರಿಗಳೇ ಕಾರಣವಾಗಿದ್ದು, ಅಡುಗೆ ಕೋಣೆಯಲ್ಲಿ ನಲ್ಲಿ ಪೈಪ್ ಅಳವಡಿಸಲು ಗೋಡೆ ಕೊರೆದು ಅದನ್ನು ಮುಚ್ಚದೆ ಹಾಗೆ ಬಿಟ್ಟಿರುವ ಕಾರಣ ಹಾವು ಪ್ರವೇಶ ಮಾಡಿದೆ, ನಲ್ಲಿ ಅಳವಡಿಸಲು ಕೊರೆದಿದ್ದ ಜಾಗವನ್ನು ಮುಚ್ಚುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲೆಗಳಲ್ಲಿ ಹಾವು, ಚೇಳು ವಾಸಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿವೆ. ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಸ್ಥಳೀಯ ಶಾಸಕರಿಗೆ, ತಾಲೂಕು ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಕೊಠಡಿ ಕುಸಿದು ಬಿದ್ದು ಮಕ್ಕಳಿಗೆ ಪ್ರಾಣಾಪಾಯ ಸಂಭವಿಸಿದರೆ ಶಾಸಕರು, ಸಂಸದರು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ