ಹಾವು ಕಡಿತ: ನಾಟಿ ಚಿಕಿತ್ಸೆ ಬೇಡ, ತಕ್ಷಣ ಆಸ್ಪತ್ರೆಗೆ ತೆರಳಿ

KannadaprabhaNewsNetwork |  
Published : Sep 22, 2026, 03:00 AM IST
(ಫೋಟೊಬಿಕೆಟಿ4, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮಹೇಶ ಕೋಣಿ ಮಾತನಾಡಿದರು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಸಾರ್ವಜನಿಕರು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವು ಕಡಿತಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಮಹೇಶ ಕೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಸಾರ್ವಜನಿಕರು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವು ಕಡಿತಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಮಹೇಶ ಕೋಣಿ ಹೇಳಿದರು.ನಗರದ ಜಿಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾವು ಕಡಿತ ಸಂಭವಿಸಿದಾಗ ನಕಲಿ ವೈದ್ಯರು ಅಥವಾ ನಾಟಿ ಚಿಕಿತ್ಸಕರ ಬಳಿ ತೆರಳಿ ಅಮೂಲ್ಯ ಸಮಯ ವ್ಯರ್ಥ ಮಾಡಬಾರದು. ಸಕಾಲದಲ್ಲಿ ಆಸ್ಪತ್ರೆಗೆ ತಲುಪಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಅಶೋಕ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಅತ್ಯಗತ್ಯ. ಹಾವು ಕಚ್ಚಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮಾಡಬಾರದ ಕೆಲಸಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ (ಎಪಿಡೆಮಿಯಾಲಜಿಸ್ಟ್) ಡಾ.ಸೀಮಾ ಹುದ್ದಾರ ಅವರು ವಿವಿಧ ಪ್ರಜಾತಿಯ ಹಾವುಗಳು, ಅವುಗಳ ಸ್ವರೂಪ ಹಾಗೂ ಹಾವು ಕಡಿತದಿಂದ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳ ಕುರಿತು ಮಾಹಿತಿ ನೀಡಿದರು.ಉರಗ ರಕ್ಷಕ ರಾಜಮಹ್ಮದ ಮದಾರಿಯಾ ಮಾತನಾಡಿ, ಹಾವುಗಳು ಕಂಡುಬಂದಾಗ ಅವುಗಳನ್ನು ಅನಗತ್ಯವಾಗಿ ಕೊಲ್ಲದೆ, ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಮೀಕ್ಷಾ ಘಟಕದ ಐಡಿಎಸ್ಪಿ ಡೇಟಾ ಮ್ಯಾನೇಜರ್ ಪ್ರವೀಣ ಕಾಶಿನಕುಂಟಿ, ಪ್ಯಾರಾಮೆಡಿಕಲ್ ಕಾಲೇಜಿನ ಸಂಯೋಜಕ ಸಂತೋಷಕುಮಾರ ಮಠ, ಎಫ್ ಎಲ್ ಸಿ ಎಂ.ಬಿ.ಪಾಟೀಲ ಜಿಲ್ಲಾ ಸಮೀಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್‌ 134 ಹುದ್ದೆಗಳ ನೇಮಕಾತಿಗೆ ಶೀಘ್ರ
ತಾಳಿಕೋಟೆ ಬಂದ್; ರೈತರ ಬೃಹತ್‌ ಪ್ರತಿಭಟನೆ