ಈ ಬಾರಿ ಬರಗಾಲದಿಂದಾಗಿ ಸಾಕಷ್ಟು ಅವಾಂತರಗಳಾಗಿವೆ. ಬರಗಾಲದಿಂದ ಕುಡಿಯಲು ನೀರಿಲ್ಲದೆ ಪರದಾಟ ಒಂದೆಡೆಯಾದರೆ, ಮತ್ತೊಂದೆಡೆ ನೀರಿಲ್ಲದೆ ಬೆಳೆ ಒಣಗಹೋಗುತ್ತಿವೆ. ಇದರಿಂದ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ
ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿರುವ ಮಳೆಯಾಗುತ್ತಿರುವ ಕಾರಣ ಬಿಸಿಲಿನ ತಾಪಮಾನ ಕಡಿಮೆಯಾಗಿದೆ. ಆದರೆ, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ತರಕಾರಿ ಬೆಲೆ ಬಹಳ ದುಬಾರಿಯಾಗಿವೆ.
ಈ ಬಾರಿ ಬರಗಾಲದಿಂದಾಗಿ ಸಾಕಷ್ಟು ಅವಾಂತರಗಳಾಗಿವೆ. ಬರಗಾಲದಿಂದ ಕುಡಿಯಲು ನೀರಿಲ್ಲದೆ ಪರದಾಟ ಒಂದೆಡೆಯಾದರೆ, ಮತ್ತೊಂದೆಡೆ ನೀರಿಲ್ಲದೆ ಬೆಳೆ ಒಣಗಹೋಗುತ್ತಿವೆ. ಇದರಿಂದ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗಿತ್ತು. ಈಗ ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದ ತರಕಾರಿಗಳು ಬರುತ್ತಿರುವ ಕಾರಣ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದು. ಬೆಂಡೆ, ಕೋಸು, ಕ್ಯಾರೆಟ್ ಬೆಲೆಗಳು ಕೂಡ ದುಪ್ಪಟವಾಗಿವೆ. ಮಳೆ ಕೈಕೊಟ್ಟಿದ್ದರಿಂದ ತೋಟದ ಬೆಳೆಗಳು ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳುವರಿಯಾಗಿದೆ. ಆದ್ದರಿಂದ ಮಾರುಕಟ್ಟೆಗೆ ತರಕಾರಿ ಬರುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಬೆಲೆಗಳು ಏರತೊಡಗಿವೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದೆ. ಬೆಲೆ ಏರಿದರೂ ರೈತನಿಗೆ ನಿಜವಾದ ಬೆಲೆ ಸಿಗುವುದು ಕಷ್ಟವಾದಂತಾಗಿದೆ.
ಸ್ಥಳೀಯವಾಗಿ ತರಕಾರಿಗಳು ಹೆಚ್ಚಾಗಿ ಸಿಗುತ್ತಿತ್ತು. ಆದರೆ, ಈಗ ಅದು ಲಭ್ಯವಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ತರಕಾರಿಗಳು ಮಾರುಕಟ್ಟೆ ಬರಬೇಕಾಗಿದೆ. ಸಾಗಾಣೆ ವೆಚ್ಚ ಕೂಡ ದುಬಾರಿಯಾಗಿದೆ. ಸ್ವಾಭಾವಿಕವಾಗಿಯೇ ಬೆಲೆ ಅಧಿಕವಾಗಿದೆ. ಇನ್ನೂ ಈರುಳ್ಳಿ, ಬೆಳುಳ್ಳಿ, ಶುಂಠಿ ಬೆಲೆಯಲ್ಲೂ ಕೂಡ ಹೆಚ್ಚಾಗಿದೆ. ನೂರು ರು.ಗೆ 5 ಕೆ.ಜಿ. ಸಿಗುತ್ತಿದ್ದ ಈರುಳ್ಳಿ 3 ಕೆ.ಜಿ.ಯಾಗಿದೆ. ಬೆಳ್ಳುಳ್ಳಿ ಕೂಡ ದುಬಾರಿಯಾಗಿದೆ. ನಾಟಿ ಬೆಳ್ಳುಳ್ಳಿ 250 ರು. ದಾಟಿದೆ. ಶುಂಠಿಯ ಬೆಲೆಯಲ್ಲೂ ಕೂಡ ಹೆಚ್ಚಳವಾಗಿದೆ.
ಸೊಪ್ಪುಗಳ ಬೆಲೆಯೂ ಹೆಚ್ಚಳ:
ಕೋಸು, ಹಸಿಮೆಣಸಿನಕಾಯಿ, ನಿಂಬೆಹಣ್ಣು, ಬೀಟ್ರೋಟ್ ವಿವಿಧ ಸೊಪ್ಪುಗಳ ಬೆಲೆಗಳು ಕೂಡ ಏರಿವೆ. ಒಂದು ಕೊತ್ತುಂಬರಿ ಕಟ್ಟಿಗೆ 10 ರಿಂದ 15 ರು. ಆಗಿದೆ. ಪುದೀನ ಕೂಡ 10 ರು. ದಾಟಿದೆ. ಮೆಂತೆಸೊಪ್ಪುಂತೂ ತುಂಬ ದುಬಾರಿಯಾಗಿದೆ. ಒಂದು ಸಣ್ಣ ಕಟ್ಟು, 20 ರು. ಗೆ ಮಾರಾಟವಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಮೆಂತ್ತೆ ಸೊಪ್ಪಿನ ಮಾರಾಟವೇ ನಿಂತುಹೋಗಿವೆ. ಇನ್ನುಳಿದಂತೆ ಎಲ್ಲಾ ರೀತಿಯ ಸೊಪ್ಪುಗಳ ಬೆಲೆಗಳು ಏರಿವೆ. ಸಾಮಾನ್ಯವಾಗಿ ಸುಲಭವಾಗಿ ಸಿಗುತ್ತಿದ್ದ ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿ ಬೆಲೆ ಕೂಡ ಏರಿಕೆ ಕಂಡಿದೆ.
ಹೀಗೆ ತರಕಾರಿ, ಸೊಪ್ಪು, ಹಣ್ಣುಗಳ ಬೆಲೆಗಳು ನಿಜಕ್ಕೂ ಗಗನಕ್ಕೇರಿದೆ. ಇದು ಅನಿವಾರ್ಯವಾದರೂ ಕೂಡ ಬಡ ಮತ್ತು ಮಧ್ಯಮ ವರ್ಗದವರ ಜೇಬಿಗೆ ಕತ್ತರಿಯಾಗುವುದಂತು ನಿಜ. ಮಳೆಗಾಲ ಆರಂಭವಾಗಿದ್ದರೂ ಕೂಡ ಹೊಸ ತರಕಾರಿಗಳು ಮಾರುಕಟ್ಟೆಗೆ ಬರಲು ಇನ್ನೂ ಸಮಯ ಬೇಕಾಗಿದೆ. ಅಲ್ಲಿಯವರೆಗೂ ಈ ದುಬಾರಿ ಬೆಲೆ ತೆರಬೇಕಾಗಿದೆ.
ಹಣ್ಣುಗಳ ಬೆಲೆಯಲ್ಲೂ ಏರಿಕೆ
ಮಾವಿನಹಣ್ಣು ಮಾರುಕಟ್ಟೆಗೆ ಕಾಲಿಟ್ಟರೂ ಕೂಡ ಬೆಲೆ ಇಳಿದಿಲ್ಲ. ಕಸಿ ಮಾವಿನಹಣ್ಣು 200 ರು. ಕೆ.ಜಿ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಎಲ್ಲಾ ಮಾವಿನಹಣ್ಣಿನ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ₹150 ಇದ್ದ ದಾಳಿಂಬೆ ಹಣ್ಣಿನ ಬೆಲೆಯಂತೂ ಕೆ.ಜಿ.ಗೆ ₹250ಕ್ಕೆ ತಲುಪಿದೆ. ಸೇಬು, ಕಿತ್ತಳೆ, ದ್ರಾಕ್ಷಿ, ಪೇರಲೆ ಹಣ್ಣಿನ ಬೆಲೆಗಳು ಕೂಡ ಏರಿವೆ. ಜಂಬು ನೇರಳೆ ಹಣ್ಣಿನ ಬೆಲೆ ಕೆ.ಜಿ. ಗೆ 300 ರು. ತಲುಪಿದೆ.ವ್ಯಾಪಾರವೂ ಕಡಿಮೆ
ತರಕಾರಿಗಳು ಯಾವುದು ಸರಿಯಾಗಿ ಬರುತ್ತಿಲ್ಲ. ಹೊಸ ಬೆಳೆ ಬರುವವರೆಗೂ ಬೆಲೆ ಹೀಗೆ ಮುಂದುವರಿಯಲಿದೆ. ಆದರೆ, ತರಕಾರಿಗಳ ಬೆಲೆ ಕೇಳಿ ಗ್ರಾಹಕರು ತರಕಾರಿಗಳನ್ನು ಖರೀದಿಸಲು ಹಿಂದು ಮುಂದು ನೋಡುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಒಂದು ಕೆಜಿ ಖರೀದಿಸುವವರು ಅರ್ಧ, ಕಾಲು ಕೆಜಿ ಖರೀದಿಸುತ್ತಿದ್ದಾರೆ. ಇದರಿಂದ ವ್ಯಾಪಾರ ತುಂಬಾ ಕಡಿಮೆಯಾಗುತ್ತಿದೆ.
- ಕೆ.ಕೃಷ್ಣಪ್ಪ, ವ್ಯಾಪಾರಸ್ಥ