ಕಾಮನಹಳ್ಳಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!

KannadaprabhaNewsNetwork |  
Published : Jun 27, 2026, 12:45 AM IST
ಹಾನಗಲ್ಲ ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಬಹಿಷ್ಕಾರಕ್ಕೆ ಒಳಗಾಗಿದೆ ಎನ್ನಲಾಗಿರುವ ಮುಪ್ಪಣ್ಣ ಹರಿಜನ ಕುಟುಂಬ. | Kannada Prabha

ಸಾರಾಂಶ

ನಿವೇಶನದ ಮಾಲೀಕತ್ವ ವಿಷಯವಾಗಿ ಮೂರು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದಿಗ್ಬಂದನ ಹಾಕಿರುವ ಘಟನೆ ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹಾನಗಲ್ಲ: ನಿವೇಶನದ ಮಾಲೀಕತ್ವ ವಿಷಯವಾಗಿ ಮೂರು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದಿಗ್ಬಂದನ ಹಾಕಿರುವ ಘಟನೆ ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಾಮನಹಳ್ಳಿ ಮುಪ್ಪಣ್ಣ ಮರಿಯಪ್ಪ ಹರಿಜನ, ಯಲ್ಲಪ್ಪ ಫಕ್ಕೀರಪ್ಪ ಹರಿಜನ, ಪ್ರಕಾಶ ಮರಿಯಪ್ಪ ಹರಿಜನ ಎಂಬುವವರೇ ಈ ಸಾಮಾಜಿಕ ಬಹಿಷ್ಕಾರ ಮತ್ತು ದಿಗ್ಬಂಧನಕ್ಕೆ ಒಳಗಾದ ದಲಿತ ಕುಟುಂಬಗಳು. ಅದೇ ಗ್ರಾಮದ ಫಕ್ಕೀರೇಶ ಮಲ್ಲಪ್ಪ ಹಾವಳೇರ ಎಂಬುವರು ಈ ದಲಿತರ ಮನೆಯ ಪಕ್ಕದಲ್ಲಿರುವ ರಸ್ತೆಗೆ ತಿಪ್ಪೆ ಗೊಬ್ಬರ ಹಾಕಿ ತಮಗೆ ತೊಂದರೆ ಮಾಡಿದ್ದಾರೆ ಎಂದು ದಲಿತರು ದೂರಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ, ವಿವಾದಿತ ನಿವೇಶನಕ್ಕೆ ಹೊಂದಿಕೊಂಡಂತೆ ಇರುವ ರಸ್ತೆಗೆ ತಂತಿ ಬೇಲಿ ಹಾಕಿದ್ದಲ್ಲದೇ, ರಸ್ತೆ ಮೇಲೆ ತಿಪ್ಪೆಯ ಗೊಬ್ಬರವನ್ನೂ ಸುರಿದು ಓಡಾಟಕ್ಕೆ ಅಡಚಣೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಸ್ತೆಗೆ ಹಾಕಿದ್ದ ತಂತಿ ಬೇಲಿಯನ್ನು ಶುಕ್ರವಾರ ತೆರವುಗೊಳಿಸಲಾಗಿದೆ.

ವಸಂತ ಮುಪ್ಪಣ್ಣ ಹರಿಜನ ಮಾತನಾಡಿ, ಕಳೆದ ಬುಧವಾರದಿಂದ ಫಕ್ಕೀರೇಶ ಹಾವಳೇರ ಹಾಗೂ ಅವರ ಬೆಂಬಲಿಗರು ನಮ್ಮ ಕುಟುಂಬಕ್ಕೆ ದಿಗ್ಭಂಧನ ಹಾಕಿದ್ದಾರೆ. ಈ ಬಹಿಷ್ಕಾರದಿಂದ ನಮ್ಮ ಕುಟುಂಬಕ್ಕೆ ಮಾನಸಿಕ ಆಘಾತವಾಗಿದೆ. ಅಲ್ಲದೇ ನಮ್ಮ ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸಿಪಿಐ ಬಿ.ಕೆ. ಹಳಬಣ್ಣನವರ, ಊರಿನ ಪ್ರಮುಖರು, ತೊಂದರೆಗೆ ಒಳಗಾದ ದಲಿತ ಕುಟುಂಬಗಳ ಜೊತೆ ಮಾತನಾಡಿ ದೈರ್ಯ ತುಂಬುವ ಜೊತೆಗೆ ದಲಿತ ಕುಟುಂಬಗಳ ಮೂಲ ಸೌಕರ್ಯಗಳಿಗೆ ಯಾವುದೇ ಅಡ್ಡಿ ಮಾಡಬಾರದು ಎಂದು ತಾಕೀತು ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ.

ನಿವೇಶನ ವಿವಾದ:ಒಂದು ನಿವೇಶನ ವ್ಯಾಜ್ಯ ಈಗ ಬಹಿಷ್ಕಾರದ ರೂಪ ಪಡೆದಿದ್ದು, ಪರ-ವಿರುದ್ಧ ಆರೋಪಗಳು ಕೇಳಿ ಬಂದಿವೆ.

ಮುಪ್ಪಣ್ಣ ಹರಿಜನ ಕುಟುಂಬ ಇದು ನಮ್ಮದೇ ನಿವೇಶನ, ಕೆಲವು ವರ್ಷಗಳ ಹಿಂದೆ ಫಕ್ಕೀರೇಶ ಮಲ್ಲಪ್ಪ ಹಾವಳೇರ ಅವರ ಹಿರಿಯರ ವಿನಂತಿ ಮೇರೆಗೆ ಈ ಜಾಗೆಯನ್ನು ತಿಪ್ಪೆ ಹಾಕಿಕೊಳ್ಳಲು ಅವರಿಗೆ ಅನುಮತಿಸಲಾಗಿತ್ತು. ಆದರೆ ಈಗ ಈ ಜಾಗ ತಮ್ಮದೇ ಎಂದು ವಾದಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಜಾಗದ ಪಕ್ಕದಲ್ಲಿರುವ ರಸ್ತೆಯನ್ನು ತಂತಿ ಬೇಲಿ ಹಾಕಿ ಬಂದ್ ಮಾಡಿ ನಮಗೆ ಗ್ರಾಮದಲ್ಲಿ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಕಳೆದ ಬುಧವಾರದಿಂದ ನಾವು ಗ್ರಾಮದಲ್ಲಿ ಪ್ರವೇಶಿಸದಂತೆ ಮನೆಯಲ್ಲೇ ಗೃಹಬಂಧನಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡರು. ಫಕ್ಕಿರೇಶ ಮಲ್ಲಪ್ಪ ಹಾವಳೇರ ಮಾತನಾಡಿ, ಇದು ನೂರಾರು ವರ್ಷಗಳಿಂದ ನಮ್ಮ ಜಾಗವಾಗಿದೆ. ಈ ಜಾಗದ ಪಕ್ಕದಲ್ಲಿ ಮುಪ್ಪಣ್ಣ ಹರಿಜನ ಅವರ ಕುಟುಂಬದ ಮನೆಗಳಿಗೆ ತೆರಳಲು ನಮ್ಮ ಜಾಗೆಯಲ್ಲಿಯೇ ಗ್ರಾಮ ಪಂಚಾಯಿತಿಯಿಂದ ಕಾಂಕ್ರೀಟ್ ರಸ್ತೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಈಗ ಕಾಂಕ್ರೀಟ್ ರಸ್ತೆ ಪಕ್ಕದ ಜಾಗ ತಮ್ಮದೇ ಎಂದು ಮುಪ್ಪಣ್ಣನ ಕುಟುಂಬ ವಾದಿಸುತ್ತಿದೆ. ಇದಕ್ಕೆ ವಾಸ್ತವ ವರದಿಯನ್ನು ಅನುಸರಿಸಿ ನಮ್ಮ ಜಾಗ ನಮ್ಮದಾಗೇ ಉಳಿಯಬೇಕು. ನಾವಾಗಲಿ ನಮ್ಮೂರಿನ ಜನರಾಗಲಿ ಮುಪ್ಪಣ್ಣ ಹರಿಜನ ಅವರ ಕುಟುಂಬಕ್ಕೆ ಯಾವುದೇ ದಿಗ್ಭಂಧನ ಹೇರಿಲ್ಲ ಎಂದರು.

ಮುಪ್ಪಣ್ಣ ಹರಿಜನ ಅವರ ಕುಟುಂಬಕ್ಕೆ ಗ್ರಾಮದ ಯಾರೊಬ್ಬರೂ ದಿಗ್ಬಂಧನ ಅಥವಾ ಬಹಿಷ್ಕಾರ ಹಾಕಿಲ್ಲ. ಇದು ಎರಡು ಕುಟುಂಬಗಳ ನಡುವಿನ ಜಾಗದ ವ್ಯಾಜ್ಯವಾಗಿದೆ. ಈ ವಿಷಯದಲ್ಲಿ ಗ್ರಾಮಸ್ಥರನ್ನು ಸುತ್ತಿಹಾಕಿಕೊಳ್ಳುವ ಅಗತ್ಯವಿಲ್ಲ. ನಮ್ಮೂರಿನಲ್ಲಿ ಜಾತಿಯ ಹೆಸರಿನಲ್ಲಿ ಯಾವುದೇ ಭಿನ್ನ-ಭೇದಗಳಿಲ್ಲ ಎಂದು ಗ್ರಾಮದ ಹಿರಿಯ ಉಡಚಪ್ಪ ಗುಡ್ಡಪ್ಪ ಹೊಸಮನಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಮಾರಕ ಶಿಲ್ಪಗಳ ಅನಾದರ ಸಲ್ಲದು: ಡಾ. ಮದ್ದಾನಸ್ವಾಮಿ ಯರಬಾಳ
ಪಂಚಮಸಾಲಿಗಳಿಗೆ ರಾಜ್ಯವನ್ನೇ ಆಳುವ ಶಕ್ತಿಯಿದೆ: ಸವಿತಾ ರಮೇಶ