ಮದ್ಯವರ್ಜನ ಶಿಬಿರದಿಂದ ಸಾಮಾಜಿಕ ಬದಲಾವಣೆ ಸಾಧ್ಯ: ಡಾ. ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : Dec 10, 2025, 01:15 AM IST
9ಬಿಕೆಲ್1: ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಮದ್ಯವರ್ಜನ ಶಿಬಿರದ ಸಮಾರೋಪವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮದ್ಯವ್ಯಸನಿಗಳ ಮಾನಸಿಕ ಪರಿವರ್ತನೆ ಮಾಡಿ ಅವರು ಉತ್ತಮ ಜೀವನ ನಡೆಸುವಂತೆ ಮಾಡುವುದೇ ಮದ್ಯವರ್ಜನ ಶಿಬಿರದ ಮುಖ್ಯ ಉದ್ದೇಶವಾಗಿದೆ.

ಮುರುಡೇಶ್ವರದಲ್ಲಿ 2016ನೇ ಮದ್ಯವರ್ಜನ ಶಿಬಿರದ ಅದ್ಧೂರಿ ಸಮಾರೋಪ

ಕನ್ನಡಪ್ರಭ ವಾರ್ತೆ ಭಟ್ಕಳಮದ್ಯವ್ಯಸನಿಗಳ ಮಾನಸಿಕ ಪರಿವರ್ತನೆ ಮಾಡಿ ಅವರು ಉತ್ತಮ ಜೀವನ ನಡೆಸುವಂತೆ ಮಾಡುವುದೇ ಮದ್ಯವರ್ಜನ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.ಮಂಗಳವಾರ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ 2016ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದ್ರೀಯಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ. ಮದ್ಯವ್ಯಸನಿಗಳನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಅವರ ಮಾನಸಿಕ ಪರಿವರ್ತನೆ ಮಾಡಲಾಗುತ್ತದೆ. ಮಾನಸಿಕ ಪರಿವರ್ತನೆಯನ್ನು ಒತ್ತಡ ರಹಿತವಾಗಿ ಮಾಡಲಾಗುತ್ತದೆ ಎಂದ ಅವರು, ಮದ್ಯವರ್ಜನ ಶಿಬಿರದಿಂದ ಸಾಮಾಜಿಕ ಬದಲಾವಣೆ ಸಾಧ್ಯವಾಗಿದೆ. ಮದ್ಯವ್ಯಸನಿಗಳು ಮದ್ಯ ಸೇವನೆಯಿಂದ ಮುಕ್ತರಾಗಿ ಉತ್ತಮ ಜೀವನ ಕಂಡುಕೊಂಡಿದ್ದಾರೆ. ಮದ್ಯವರ್ಜನ ಶಿಬಿರ ಸದುಪಯೋಗ ಪಡೆದು ಉತ್ತಮ ಪ್ರಜೆಗಳಾಗಬೇಕು ಎನ್ನವುದು ನಮ್ಮ ಆಶಯವಾಗಿದೆ. ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜನರು ಎಂದು ನಮಗೆ ಬಹಳ ಪ್ರಿಯರು. ಧರ್ಮಸ್ಥಳದಲ್ಲಿ ಪ್ರತಿ ಭಾನುವಾರ ಮತ್ತು ಸೋಮವಾರ ಬೆಳಗ್ಗೆ ಇವರಿಗಾಗಿಯೇ ನಾನು ಸಮಯವನ್ನು ನಿಗದಿಪಡಿಸಿದ್ದೇನೆ. ಹೊನ್ನಾವರದಲ್ಲಿ 2 ಎಕರೆ ಜಾಗ ಕೊಟ್ಟರೆ ರಾಣಿ ಚೆನ್ನಾಬೈರಾದೇವಿ ಸ್ಮಾರಕ ಭವನ ಮಾಡಲು ಉತ್ಸುಕರಾಗಿದ್ದೇವೆ. ಆದಷ್ಟು ಬೇಗ ಜಾಗದ ವ್ಯವಸ್ಥೆ ಮಾಡಿದರೆ ಸ್ಮಾರಕ ಭವನದ ಕಾಮಗಾರಿಯೂ ಆರಂಭವಾಗುತ್ತದೆ ಎಂದ ಅವರು, ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ಬಗ್ಗೆ ಜಿಲ್ಲೆಯ ಜನರಿಗೆ ಅಪಾರವಾದ ಗೌರವ ಇದೆ. ಸರ್ಕಾರ ಮಾಡದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಧರ್ಮಸ್ಥಳದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ. ಜಿಲ್ಲೆಯ ಬಹುತೇಕ ದೇವಸ್ಥಾನಗಳಿಗೆ ವೀರೇಂದ್ರ ಹೆಗ್ಗಡೆ ಸಹಾಯ ಮಾಡಿದ್ದಾರೆ. ಜಿಲ್ಲೆಯ ಜನರು ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಸಾಕಷ್ಟಿದೆ. ವೀರೇಂದ್ರ ಹೆಗ್ಗಡೆಯವರು ಕೃಷಿ ವಿಶ್ವವಿದ್ಯಾಲಯ ಮಾಡುತ್ತಾರೆ ಎಂದು ಗೊತ್ತಾಗಿದ್ದು, ಈ ಕೃಷಿ ವಿಶ್ವವಿದ್ಯಾಲಯವನ್ನು ನನ್ನ ಕ್ಷೇತ್ರವಾದ ಭಟ್ಕಳದಲ್ಲಿ ಮಾಡಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಕೃಷಿ ವಿಶ್ವವಿದ್ಯಾಲಯ ಮಾಡಲು ಎಲ್ಲಾ ರೀತಿಯ ಸಹಕಾರ ಮಾಡುವುದಾಗಿಯೂ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ಮದ್ಯವರ್ಜನ ಶಿಬಿರ ಮಾಡುವುದು ಕಷ್ಚದಾಯಕವಾಗಿದ್ದರೂ ಸಹ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮಾಡಲಾಗಿದೆ. 101 ಜನರನ್ನು ಶಿಬಿರದ ಮೂಲಕ ಮದ್ಯಸೇವನೆಯುಂದ ಮುಕ್ತರನ್ನಾಗಿ ಮಾಡಲಾಗಿದೆ ಎಂದರು.

ಉಪಸ್ಥಿತರಿದ್ದ ಮದ್ಯವರ್ಜನಶಿಬಿರ ವ್ಯವಸ್ಥಾಪಕ ಸಮಿತಿಯ ಸತೀಶ ಶೇಟ್ ಮಾತನಾಡಿದರು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿನ ಅಧ್ಯಕ್ಷ ನಟರಾಜ ಬಾದಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ ಪಾಯಸ್, ಯೋಜನೆಯ ನಿರ್ದೇಶಕ ಆನಂದ ಸುವರ್ಣ, ಪತ್ರಕರ್ತ ರಾಧಾಕೃಷ್ಣ ಭಟ್ಟ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಾಜು ನಾಯ್ಕ ಮಂಕಿ, ಎಸ್.ಎಸ್. ಕಾಮತ್ ಮುರುಡೇಶ್ವರ ಮುಂತಾದವರಿದ್ದರು.

ಮದ್ಯವರ್ಜನ ಶಿಬಿರಾರ್ಥಿಗಳು ತಮ್ಮ ಅನುಭವ ಹೇಳಿ ವೀರೇಂದ್ರ ಹೆಗ್ಗಡೆಯವರ ಮುಂದೆ ತಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡುವುದಿಲ್ಲ ಎಂದು ಹೇಳಿದರು. ಗಣೇಶ ನಿರೂಪಿಸಿದರು. ಯೋಜನೆಯ ಮೇಲ್ವಿಚಾರಕಿ ಲತಾ ಬಂಗೇರ ವಂದಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾವಿರಾರು ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ