ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ: 21ನೇ ಶತಮಾನದ ಭಾರತದಲ್ಲಿ ಒಳಗೊಳ್ಳುವಿಕೆ, ಪ್ರಜಾಸತ್ತಾತ್ಮಕತೆ ಮತ್ತು ಸಾಮಾಜಿಕ ನ್ಯಾಯ ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗದೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಬೇಕು ಎಂಬುದು ಬಾಬಾಸಾಹೇಬರ ಆಶಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಒಳಗೊಳ್ಳುವಿಕೆ ಪ್ರಕ್ರಿಯೆಯು ಅಂಬೇಡ್ಕರ್ ಅವರ ಆರ್ಥಿಕ ನೀತಿಗಳ ಅಡಿಪಾಯವಾಗಿದೆ. ಪ್ರಜಾಪ್ರಭುತ್ವ ಎಂದರೆ ಕೇವಲ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವುದಲ್ಲ, ಅದು ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಭ್ರಾತೃತ್ವವನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಅಂತರ್ಜಾತಿ ವಿವಾಹ ಮತ್ತು ಸಾಮಾಜಿಕ ಬೆರೆಯುವಿಕೆಯ ಮೂಲಕ ಮನಸ್ಸುಗಳ ನಡುವಿನ ಗೋಡೆಗಳನ್ನು ಕೆಡವಬೇಕಿದೆ ಎಂದು ಕರೆ ನೀಡಿದರು.ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಸಾಬೀರ್ ಅಹ್ಮದ್ ಮುಲ್ಲಾ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಪ್ರತಿ ಮನೆ ಹಾಗೂ ಪ್ರತಿ ಮನವನ್ನು ತಲುಪಬೇಕು ಎಂದರು.
ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಆವತ್ತಿ ರಾಮಯ್ಯ ಮಾತನಾಡಿದರು.
ವಿವಿ ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಎಚ್.ಎಸ್., ತುಮಕೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಕೇಶವ ಹಾಗೂ ತುಮಕೂರು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಪರಶುರಾಮ ಕೆ.ಜಿ., ವಾಣಿಜ್ಯ ನಿಕಾಯ ಡೀನ್ ಪ್ರೊ. ಪಿ ಪರಮಶಿವಯ್ಯ, ಪ್ರಾಧ್ಯಾಪಕರಾದ ಪ್ರೊ. ಶೇಖರ್ ಬಿ., ಉಪಸ್ಥಿತರಿದ್ದರು.
ಇದೇ ವೇಳೆ ಎಸ್‌ಐಆರ್ ಜಾರಿಯಿಂದ ಆಗುತ್ತಿರುವ ಲೋಪಗಳನ್ನು ಪ್ರಸ್ತಾಪಿಸಿದ ಅವರು, ಇದರಿಂದ ಬುಡಕಟ್ಟು ಹಾಗೂ ಅಲೆಮಾರಿಗಳು ಸೇರಿದಂತೆ ಸುಮಾರು ೬.೫ ಕೋಟಿ ಜನರ ಮತಗಳನ್ನು ಕೈಬಿಡುವ ಕೆಲಸವಾಗುತ್ತಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದ್ದರೂ, ಮಾತನಾಡಿದ ನಂತರದ ಸ್ವಾತಂತ್ರ್ಯವಿದೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಚಿಂತನೆಯಂತೆ ಯಾವುದನ್ನೂ ಪ್ರಶ್ನಿಸದೆ ನಂಬಬೇಡಿ. ಇಂದು ನಾವು ಹೇಳಿಕೊಳ್ಳಲು ಸಂವಿಧಾನವನ್ನು ಅನುಸರಿಸುತ್ತಿದ್ದರೂ, ಆಚರಣೆಯಲ್ಲಿ ಮನುಸ್ಮೃತಿಯೇ ಮುನ್ನೆಲೆಗೆ ಬರುತ್ತಿರುವುದು ಎಂದು ವಿಷಾದ ವ್ಯಕ್ತಪಡಿಸಿದರು.