ಉಡುಪಿ - ಮಡಿವಾಳ ಮಾಚೀದೇವರ ವಚನಗಳಿಂದ ಸಮಾಜ ಸುಧಾರಣೆ : ಶಾಸಕ ಯಶ್ಪಾಲ್ ಸುವರ್ಣ

KannadaprabhaNewsNetwork |  
Published : Feb 02, 2025, 01:04 AM ISTUpdated : Feb 02, 2025, 11:29 AM IST
1ಮಾಚಿ | Kannada Prabha

ಸಾರಾಂಶ

ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ನಡೆಯಿತು. ಶಾಸಕ ಯಶ್ಪಾಲ್ ಎ. ಸುವರ್ಣ ಉದ್ಘಾಟಿಸಿ ಮಾತನಾಡಿದರು.

 ಉಡುಪಿ : 12ನೇ ಶತಮಾನದ ಪೂರ್ವದಲ್ಲಿ ಬೇರೂರಿದ್ದ ಸಾಮಾಜಿಕ ಶೋಷಣೆ, ಪಿಡುಗು, ದೌರ್ಜನ್ಯ, ಜಾತಿ ತಾರತಮ್ಯ, ಅಸಮಾನತೆ, ಮೂಢನಂಬಿಕೆ ಮತ್ತು ಶೋಷಣೆಯನ್ನು ತೊಡೆದು ಹಾಕುವಲ್ಲಿ ಹಾಗೂ ಸಮಾಜವನ್ನು ಸುಧಾರಣೆಗೆ ತರುವಲ್ಲಿ ಮಡಿವಾಳ ಮಾಚೀದೇವರ ವಚನಗಳು ಹೆಚ್ಚು ಪ್ರಭಾವ ಬೀರಿದ್ದವು ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಮಾತನಾಡಿ, ಮಡಿವಾಳ ಮಾಚೀದೇವರು ರಚಿಸಿದ ವಚನಗಳು ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಸಹಕಾರಿಯಾಗಿವೆ ಎಂದರು.

ಹಿರಿಯಡ್ಕದ ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್. ಉಪನ್ಯಾಸ ನೀಡಿ, ಬಸವಣ್ಣನವರ ಸಮಕಾಲೀನವರಲ್ಲಿ ಮಡಿವಾಳ ಮಾಚೀದೇವರು ಒಬ್ಬರು. ಬಸವಣ್ಣನವರ ಕಾಯಕವೇ ಕೈಲಾಸದ ಮಾತನ್ನು ಅನುಸರಿಸುತ್ತಾ, ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸಮಾಜಕ್ಕೆ ಸಾರಿದವರು, ವಚನ ಸಾಹಿತ್ಯಗಳನ್ನು ನಾಶ ಪಡಿಸುವ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ತನಿಷ್ ವಿ. ಗುಜರನ್ ಹಿರಿಯಡ್ಕ, ಉಮೇಶ್ ಸಾಲಿಯಾನ್ ಹಿರಿಯಡ್ಕ, ಸಿರಿ ಎಸ್. ಮಡಿವಾಳ ಹೇರಾಡಿ, ಗಣೇಶ್ ಎಸ್. ಸಾಲಿಯಾನ್ ಹಾಗೂ ಪ್ರಜ್ವಲ್ ಮಡಿವಾಳ ಕೋಟ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಿಡಿಪಿಯು ಮಾರುತಿ, ಮಡಿವಾಳ ಸಮಾಜದ ಪದಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗರಾಜ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು