ಶಿವಶರಣೆಯರ ವಚನ ಸಾಹಿತ್ಯಗಳಿಂದ ಸಮಾಜ ಸುಧಾರಣೆ: ಡಿಸಿ ಡಾ.ಕೆ. ವಿದ್ಯಾಕುಮಾರಿ

KannadaprabhaNewsNetwork |  
Published : Feb 13, 2024, 12:48 AM IST
ಶರಣ ಜಯಂತಿ | Kannada Prabha

ಸಾರಾಂಶ

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ12ನೇ ಶತಮಾನದಲ್ಲಿ ಶಿವಶರಣೆಯರು ರಚಿಸಿದ ವಚನ ಸಾಹಿತ್ಯಗಳು ವಿಚಾರ ಕ್ರಾಂತಿಯನ್ನು ಮಾಡುವುದರೊಂದಿಗೆ ಸಮಾಜ ಸುಧಾರಣೆಗೂ ಕಾರಣವಾದವು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

12ನೇ ಶತಮಾನ ಮಹತ್ವಪೂರ್ಣವಾದ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡ ಪ್ರತಿಯೊಬ್ಬ ಶರಣರು ವಿಶಿಷ್ಟವಾದ ಜೀವನ ನಡೆಸಿದ್ದಾರೆ. ಪ್ರಮಾಣಿಕ ಕೆಲಸಕ್ಕೆ ಗೌರವ ದೊರಕುತ್ತದೆ ಎಂಬುದನ್ನು ಇವರುಗಳಿಂದ ತಿಳಿಯಬಹುದಾಗಿದೆ. ವೈಚಾರಿಕ ಜ್ಞಾನವನ್ನು ಹೊಂದಿದ್ದ ಇವರುಗಳು ಮಾತು ಮತ್ತು ಕೃತಿಗೆ ವ್ಯತ್ಯಾಸ ಇಲ್ಲದಂತೆ ಸರಳ ಜೀವನ ನಡೆಸಿರುವುದು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದರು.

ಶಿವಶರಣೆಯರು ಜಾತಿ, ಮತ, ಪಂಥದ ಭೇದವಿಲ್ಲದೇ ಸಮ ಸಮಾಜದ ಕನಸನ್ನು ಕಂಡು ಅದರಂತೆ ಬದುಕಿ ತೋರಿಸಿದ್ದಾರೆ. ಅವರುಗಳ ಆದರ್ಶಗಳು ಇಂದಿಗೂ ದಾರಿದೀಪವಾಗಿದ್ದು, ಅವುಗಳನ್ನು ಪಾಲಿಸುವುದರೊಂದಿಗೆ ವಚನಕಾರರ ತತ್ವಗಳು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪನ್ಯಾಸ ನೀಡಿ, ಬಸವಣ್ಣನವರ ಪ್ರಭಾವದಿಂದ 12ನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯಾಯಿತು. ಪ್ರತಿಯೊಬ್ಬರೂ ಜೀವನ ನಿರ್ವಹಣೆಗೆ ಶ್ರಮವಹಿಸಿ ದುಡಿಯುವುದರೊಂದಿಗೆ ವೃತ್ತಿಧರ್ಮಕ್ಕೆ ಮೋಸ ಮಾಡಬಾರದೆನ್ನುವುದು ವಚನಕಾರರ ಮುಖ್ಯ ಆಶಯ. ಅತ್ಯಂತ ಹಿಂದುಳಿದ ವರ್ಗದಲ್ಲಿ ಹುಟ್ಟಿದ ಕಾಯಕ ಶರಣರು ತಮ್ಮ ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಗುರುತಿಸಿಕೊಂಡು, ಸಾಮರಸ್ಯದ ಜೀವನ ಸಾಗಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಕಲಾವಿದ ವಾಸುದೇವ ಬನ್ನಂಜೆ, ಕ.ಸಾ.ಪ. ಕಾರ್ಯದರ್ಶಿ ನರಸಿಂಹ ಮೂರ್ತಿ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಕೋಶಾಧಿಕಾರಿ ಮನೋಹರ್ ವಂದಿಸಿದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ