ವಿವಿಗಳ ಸಮಾಜ ವಿಜ್ಞಾನ ವಿಭಾಗಗಳು ಒಂದಾಗಿ ಕೆಲಸ ಮಾಡಬೇಕು: ಡಾ.ಜಿ.ವಿ.ಜೋಶಿ

KannadaprabhaNewsNetwork | Updated : Jul 29 2024, 12:47 AM IST

ಸಾರಾಂಶ

ದೇಶದ ವಿವಿಧ ಕಡೆಗಳಿಂದ ಸುಮಾರು 60 ಮಂದಿ ಸಮಾಜ ವಿಜ್ಞಾನಿಗಳು, ಸಂಶೋಧಕರು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಗಣಿತ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರಗಳಿಗೆ ಅರ್ಥಶಾಸ್ತ್ರ ವಿಭಾಗಗಳಲ್ಲಿ ಅತಿಯಾದ ಪ್ರಾಧಾನ್ಯ ನೀಡುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಇನ್ನತ ವ್ಯಾಸಂಗ ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ, ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯ ಡಾ ಜಿ.ವಿ.ಜೋಶಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷತ್‌ ದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಸಭಾಭವನದಲ್ಲಿ ಜು.19 ಮತ್ತು 20 ರಂದು ಆಯೋಜಿಸಿದ ಎರಡು ದಿನಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿ: ಭಾರತದ ಜ್ಞಾನಾಧಾರಿತ ಚಿಂತನೆ ಮತ್ತು ಕಾರ್ಯಾಚರಣೆಗಾಗಿ ಒಂದು ಮಾದರಿ’ ವಿಚಾರದಲ್ಲಿ ಮಾತನಾಡಿದ ಡಾ.ಜಿ.ವಿ.ಜೋಶಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಳಗೊಳ್ಳುವಿಕೆ ಅಭಿವೃದ್ಧಿಯ ಚಿಂತನೆ ಇದೆ ಎಂದರು.

ಅಧಿಕಾರದ ವಿಕೇಂದ್ರೀಕರಣದ ಮಹತ್ವ ತಿಳಿಬೇಕಾದರೆ ಕೌಟಿಲ್ಯನ ಅರ್ಥಶಾಸ್ತ್ರ ಓದಬೇಕು. ರಾಜನಾದವನು ಕೆಲವು ಅರ್ಹತೆಗಳನ್ನು ಹೊಂದಿರಬೇಕು. ಆತ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯ ಹೊಂದಿರಬೇಕು. ಅಧಿಕಾರ ವಿಕೇಂದ್ರೀಕರಣ ಸಾಧಿಸಲು ಭಾರತದ ಸಂವಿಧಾನ 73 ಮತ್ತು 74ನೇ ತಿದ್ದುಪಡಿಗಳನ್ನು ಜಾರಿಮಾಡಿ ಮೂರು ದಶಕಗಳೇ ಕಳೆದಿದೆ. ಇವುಗಳ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬುದು ಈಗಿನ ಪ್ರಶ್ನೆ. ಈ ತಿದ್ದುಪಡಿಗಳ ಮೌಲ್ಯಮಾಪನ ಮಾಡಲು ಈಗ ಕಾಲ ಪಕ್ವವಾಗಿದೆ. ವಿಶ್ವವಿದ್ಯಾಲಯಗಳ ಸಮಾಜ ವಿಜ್ಞಾನ ವಿಭಾಗಗಳು ಒಂದಾಗಿ ಕೆಲಸ ಮಾಡಬೇಕು. ಆಗ ತಳಮಟ್ಟದ ಸಾಧನೆ ಸಾಧ್ಯವಿದೆ ಎಂದರು.

ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ, ಇತಿಹಾಸ, ಸಮಾಜ ಶಾಸ್ತ್ರ ಮತ್ತು ಮಾನಃ ಶಾಸ್ತ್ರಗಳ ಈಗಿನ ದುರವಸ್ಥೆಗಳ ಮೇಲೆ ವಿಶೇಷ ಚರ್ಚೆ ನಡೆಯಿತು. ಇದರಿಂದಾಗಿ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ ಎನ್ನುವ ಕೊರಗು ಕಾಡುತ್ತಿದೆ ಎಂದು ಹಲವರು ವಾದಿಸಿದರು.

ಆರ್‌ಎಸ್‌ವಿಪಿ ಕಾರ್ಯದರ್ಶಿ ಪ್ರೊ. ಶೈಲಾ ರೈ ಮಾತನಾಡಿ, ದೇಶದ ಹಲವು ವಿವಿಗಳ ತತ್ವಶಾಸ್ತ್ರ ವಿಭಾಗಗಳು ಕಣ್ಮರೆಯಾಗಿರುವುದು ದೊಡ್ಡ ದುರಂತ. ತತ್ವಶಾಸ್ತ್ರ ವಿಭಾಗಕ್ಕೆ ಬಂದ ದುಸ್ಥಿತಿ ಇತರ ವಿಭಾಗಗಳಿಗೂ ಸದ್ಯದಲ್ಲೇ ಬರಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಚರ್ಚಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ದೆಹಲಿ ಜವಾಹರಲಾಲ್ ನೆಹರು ವಿವಿ ಇಕೋ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕ ಡಾ. ರಮೇಶ್ ಸಾಲಿಯಾನ್, ಗಣಿತ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರಗಳ ಅಧ್ಯಯನ ಕಡ್ಡಾಯಗೊಳಿಸಿದ ಕಾರಣದಿಂದಾಗಿಯೇ ಇಕೋ ವಿಭಾಗದಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರವೇಶ ಪಡೆಯಲು ಬಯಸುವ ವಿವಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ ವಿವಿಧ ಕಡೆಗಳಿಂದ ಸುಮಾರು 60 ಮಂದಿ ಸಮಾಜ ವಿಜ್ಞಾನಿಗಳು, ಸಂಶೋಧಕರು ಆಗಮಿಸಿದ್ದರು.

Share this article