ರೋಣ: ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಸಮಾಜ ಸೇವೆ ಮಾಡುವ ಪ್ರಜ್ಞೆ ಜಾಗೃತವಾಗಲು ಸಹಕಾರಿಯಾಗುವುದು ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.
ಅವರು ತಾಲೂಕಿನ ಮುದೇನಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚೆನ್ನಮ್ಮ ಪದವಿಪೂರ್ವ ಮಹಾವಿದ್ಯಾಲಯ ರೋಣ ವತಿಯಿಂದ ಜರುಗಿದ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ- 2023-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು. ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ಶಿಬಿರ ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.ಪ್ರಾಚಾರ್ಯ ಎಂ.ಎಸ್. ಗೌಡರ ಮಾತನಾಡಿ , ಸಮಾಜ ಸೇವೆಯ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶವೂ ಇದೇ ಆಗಿದೆ. ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಉಪಾಧ್ಯಕ್ಷ ಶ್ರೀಶೈಲಪ್ಪ ಹಡಗಲಿ, ತಾಪಂ ಮಾಜಿ ಸದಸ್ಯ ಶೇಖರಗೌಡ ಚನ್ನಪ್ಪಗೌಡ್ರ, ಬಸವರಾಜ ವಡ್ಡಟ್ಟಿ, ಹಿರೇಗೌಡ್ರ, ಗೋವಿಂದಗೌಡ ಕೆಂಚನಗೌಡ್ರ, ವೀರನಗೌಡ ಪಾಟೀಲ, ಸುರೇಶಗೌಡ ಚನ್ನಪ್ಪಗೌಡ್ರ, ಐ.ಎಫ್. ಬೋದ್ಲೇಖಾನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಘಟಕ ಕಾರ್ಯಕ್ರಮ ಅಧಿಕಾರಿ ಎಂ.ಟಿ.ಆರೇರ ಸ್ವಾಗತಿಸಿ, ವಂದಿಸಿದರು.