ಹಲಗೂರು:
ನಿಟ್ಟೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2000 ಇಸವಿಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು 25ನೇ ವರ್ಷದ ಸವಿನೆನಪಿಗಾಗಿ ಸುಮಾರು 50 ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಮಾಜಕ್ಕೆ ನಮ್ಮಿಂದ ಆಗುವ ಸಮಾಜಮುಖಿ ಸೇವೆ ಮಾಡುವ ಸಂಕಲ್ಪ ಮಾಡಿದರು.ಹಲಗೂರಿನ ವಿದ್ಯಾಗಣಪತಿ ದೇವಸ್ಥಾನದಲ್ಲಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪ್ರಸ್ತುತ ಉಪನ್ಯಾಸಕರಾಗಿ ಮಂಡ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ಯಾರ್ಥಿ ನಾಗರಾಜು ಮಾತನಾಡಿ, 25ನೇ ವರ್ಷದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಇಂದು ನಾವು ಮತ್ತು ನಮಗೆ ಶಿಕ್ಷಣ ನೀಡಿದ ಶಿಕ್ಷಕರ ಜೊತೆ ಸೇರಿ ಸಮಾಜಕ್ಕೆ ಸೇವೆ ಸಲ್ಲಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದರು.
ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ವ್ಯಾಸಂಗ ಮಾಡಿದ ಶಾಲೆಯನ್ನು ಎಂದಿಗೂ ಮರೆಯಬಾರದು ಎಂಬ ದೃಷ್ಟಿಯನ್ನು ಇಟ್ಟುಕೊಂಡು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಹಾಗೂ ಉದ್ಯಮಿಗಳಾಗಿ, ಸ್ನೇಹಿತರ ಸ್ನೇಹ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದರು.ಈ ವೇಳೆ ನಿಟ್ಟೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ದೇವರಾಜು, ನಿವೃತ್ತ ಶಿಕ್ಷಕರಾದ ಪ್ರಕಾಶ್, ದೇಸಾಯಿ, ಮತ್ತು ಹಳೆಯ ವಿದ್ಯಾರ್ಥಿಗಳಾದ ಶೇಖರ್, ಪುರುಷೋತ್ತಮ್ ಸೇರಿದಂತೆ ಇತರರು ಇದ್ದರು.
ಹೈಕೋರ್ಟ್ ನ್ಯಾಯಾಧೀಶರಿಗೆ ಅಭಿನಂದನೆಮಳವಳ್ಳಿ:
ಪಟ್ಟಣದ ಪ್ರವಾಸಿ ಮಂದಿರದಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ್ ಅವರನ್ನು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯ ಹಾಗೂ ವಕೀಲರ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಿ ಸ್ವಾಗತಿಸಲಾಯಿತು.ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಸುಭ್ರಮಣ್ಯಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ತಾಲೂಕು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ, ಅಪಾರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಕಾರ್ಯದರ್ಶಿ ಮಲ್ಲಪ್ಪ, ಅಪರ ಸರ್ಕಾರಿ ಅಭಿಯೋಜಕ ಶ್ರೀಕಂಠಸ್ವಾಮಿ ಸೇರಿದಂತೆ ಇತರರು ಇದ್ದರು.