ಸಮಾಜ ಸೇವೆಯೇ ಗುರುಗಳಿಗೆ ಸಲ್ಲಿಸುವ ನಿಜವಾದ ಕಾಣಿಕೆ

KannadaprabhaNewsNetwork | Published : Sep 18, 2024 1:49 AM

ಸಾರಾಂಶ

ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದರೆ ಅದು ಗುರುಗಳಿಗೆ ಸಲ್ಲಿಸುವ ನಿಜವಾದ ಕಾಣಿಕೆ ಎಂದು ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಸಿ. ಶಿವಯೋಗಿ ಕಳಸದ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದರೆ ಅದು ಗುರುಗಳಿಗೆ ಸಲ್ಲಿಸುವ ನಿಜವಾದ ಕಾಣಿಕೆ ಎಂದು ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಸಿ. ಶಿವಯೋಗಿ ಕಳಸದ ಹೇಳಿದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗು ಆಸ್ಪತ್ರೆಯ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‍ಜೆಎಂ ಪಾಲಿಟೆಕ್ನಿಕ್‍ನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜ್ಞಾನಾರ್ಜನೆಯ ಹಸಿವನ್ನು ಪೂರೈಸಲು ಮನೆಯ ವಾತಾವರಣ ಪೂರಕವಿಲ್ಲದಿದ್ದಾಗ, ಹೆಚ್ಚಿನ ವಿದ್ಯಾಭ್ಯಾಸ ಪಡೆದು ಸಮಾಜಕ್ಕೆ ಉತ್ತಮರಾಗಲು ಹಾಗೂ ಉತ್ತಮ ನಾಗರೀಕರಾಗಲು ಗುರುಗಳ ಕೃಪೆ ಅಗತ್ಯವಾಗಿ ಬೇಕು ಎಂದರು.

ಕಾಲೇಜು ಸ್ಥಾಪನೆಯಾಗಿ 40 ವರ್ಷ ಕಳೆದಿದೆ. ಇಂಥ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಸುಖಮಯ ಜೀವನವನ್ನು ನಡೆಸುತ್ತಾ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುತ್ತಾ ಬಂದಿದ್ದಾರೆ. ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ನೆರವೇರಿಸುತ್ತಿರುವುದು ಆಶಾದಾಯಕ ಸಂಗತಿ. ಇಲ್ಲಿನ ಅಧಿಕಾರಿಗಳು ಕೂಡ ಗುರುಗಳ ಆಶೀರ್ವಾದದಿಂದ ತಯಾರಾಗಿ ಸಾಧನೆ ಗೈದವರು. ಇಂಥ ಕ್ರಿಯಾಶೀಲ ಸಂಘದಲ್ಲಿ ತೊಡಗಿಸಿಕೊಂಡು ಏನಾದರೂ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು.

ಆಡಳಿತ ಮಂಡಳಿಯ ಸದಸ್ಯ ಡಾ. ಬಸವ ಕುಮಾರ ಶ್ರೀಗಳು ಮಾತನಾಡಿ, ದ.ರಾ. ಬೇಂದ್ರೆಯವರು ಹೇಳುವ ಹಾಗೆ, ಹಳೆಯ ಸ್ನೇಹಿತನಿಗಿಂತ ಕನ್ನಡಿ ಬೇಕೆ, ಎನ್ನುವ ಮಾತಿನಂತೆ ನಮ್ಮ ಮನಸ್ಸು ಸಂಪೂರ್ಣವಾಗಿ ನಮ್ಮ ಆಪ್ತ ಸ್ನೇಹಿತನಿಗೆ ಗೊತ್ತಿರುತ್ತದೆ. ವಿಶೇಷವೆಂದರೆ ಇಲ್ಲಿನ ಹಲವಾರು ಕೆಲಸಗಾರರು ಮುರುಘಾಮಠದ ಕಲಾವಿದರಾಗಿದ್ದವರು. ಅವರು ಉತ್ತಮ ಕೆಲಸ ಮಾಡಿದವರು. ಹಿರಿಯರು ಮಾಡಿದ ಉತ್ತಮ ಕಾರ್ಯಗಳನ್ನು ನೆನಪು ಮಾಡಿಕೊಂಡು ಮುಂದಿನವರಿಗೆ ಪರಿಚಯಿಸಬೇಕು ಎಂದರು.

ಮಠದ ಮೂರು ಜನರತ್ನಗಳಾದ ಜಯದೇವ, ಜಯವಿಭವ ಮತ್ತು ಮಲ್ಲಿಕಾರ್ಜುನ ಶ್ರೀಗಳು ಮಾಡಿದ ಕಾರ್ಯವನ್ನು ನೆನಪು ಮಾಡಿಕೊಂಡಲ್ಲಿ ಅದು ಮುಂದಿನ ಪೀಳಿಗೆಗೆ ತಲುಪುತ್ತದೆ. ಆ ಕಾರ್ಯವನ್ನು ಮಾಡುವ ಮನಸ್ಸು ನಮ್ಮದಾಗಬೇಕಷ್ಟೆ. ಎಸ್‍ಜೆಎಂ ವಿದ್ಯಾಪೀಠ ಹುಟ್ಟು ಹಾಕಲು ಈ ಮೂವರ ಪರಿಶ್ರಮ ಹೆಚ್ಚಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಆ ಮೂಲಕ ಪವಿತ್ರವಾದ ಮಠದ ಬಗ್ಗೆ ಅಲ್ಲಿನ ಹಿರಿಯ ಶ್ರೀಗಳ ಬಗ್ಗೆ ತಿಳಿಸಬೇಕು, ನೆನಪಿಸಬೇಕು. ಜಯದೇವ ಜಗದ್ಗುರುಗಳು ಧರ್ಮಾಧಿಕಾರಿಯಾಗಿ ಹೇಗೆ ಪೀಠ ನಡೆಸಿದರು ಎಂಬುದನ್ನು ಸ್ಮರಿಸಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲು ಮಲ್ಲಿಕಾರ್ಜುನ ಶ್ರೀಗಳು ಪಟ್ಟ ಪರಿಶ್ರಮವನ್ನ ನೆನಪು ಮಾಡಿಕೊಳ್ಳಬೇಕು ಎಂದರು.ಪ್ರಾಸ್ತಾವಿಕ ಮಾತನಾಡಿದ ನಾಗವೇಣಿ, ಗುರು ಶಿಷ್ಯರ ನಡುವೆ ಮಧುರವಾದ ಸಂಬಂಧ ಇರಬೇಕು. ಹಳೆಯ ವಿದ್ಯಾರ್ಥಿಗಳನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಂಘಟನೆಯ ಅಗತ್ಯವಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳ ನಡುವೆ ಈ ಸಂಘ ಸೇತುವೆಯಾಗಿ ಸಹಕಾರ ನೀಡುತ್ತದೆ. ಈ ಸಂಘವನ್ನ ವಾಟ್ಸಪ್ ಗ್ರೂಪ್ ಮಾಡುವ ಮೂಲಕ ಪ್ರಚಾರ ಮಾಡಿ, ಅದರ ಮೂಲಕ ಡೊನೇಶನ್ ಸದಸ್ಯತ್ವ ಕೂಡ ಹೆಚ್ಚಿಸಿಕೊಳ್ಳಬಹುದು ಎಂದರು.ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಸ್. ಶಂಕರ್, ಡಾ. ಎಸ್.ವಿ ಚಂದ್ರಶೇಖರ್, ಅಪರ ಸಾರಿಗೆ ಆಯುಕ್ತ ಬಿ.ಡಿ. ಉಮಾಶಂಕರ್, ಟಿಎಸ್ಎನ್. ಜಯಣ್ಣ , ಪ್ರಾಚಾರ್ಯ ಎಸ್.ವಿ .ರವಿಶಂಕರ್, ಮಹಾದೇವ, ಸತ್ಯನಾರಾಯಣ ನಾಯಕ, ಎಸ್.ಆರ್. ವೆಂಕಟೇಶ್, ಕೆ.ವಿ ಸುರೇಶ್, ನಾಗಭೂಷಣ್ ಇದ್ದರು. ಸಂಘದ ಕಾರ್ಯದರ್ಶಿ, ಪದ್ಮಾವತಿ ನಿರೂಪಣೆ ಮಾಡಿದರು.

Share this article