ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರ ಸಾಧನೆಯನ್ನು ಗುರುತಿಸಿ, ಗೌರವಿಸುವ ದಿನವಾಗಿದ್ದು, ಇದು ಕೇವಲ ಆಚರಣೆಯಲ್ಲ, 20ನೇ ಶತಮಾನದ ಆರಂಭದಲ್ಲಿ ಮಹಿಳಾ ಕಾರ್ಮಿಕರು ಉತ್ತಮ ವೇತನ, ಕಡಿಮೆ ಕೆಲಸದ ಅವಧಿ ಮತ್ತು ಮತದಾನದ ಹಕ್ಕಿಗಾಗಿ ನಡೆಸಿದ ಬೃಹತ್ ಹೋರಾಟಗಳ ಫಲವಾಗಿದೆ ಎಂದರು. ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿ ಕಡೆಗಣಿಸಲಾಗುತ್ತಿದೆ. ಆದರೂ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯದಿಂದ ಸಬಲೀಕರಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಎಲ್ಲರಲ್ಲೂ ಸಾಮರ್ಥ್ಯ ಇದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಅದನ್ನು ಹೊರಬಿಡಬೇಕು. ಸರ್ಕಾರ ಮಹಿಳೆಯರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದೆ. ಮಹಿಳಾ ಸಂಘಟನೆಗಳು ಮಹಿಳೆರನ್ನು ಸಬಲೀಕರಣ ಗೊಳಿಸುತ್ತಿದೆ. ಮಹಿಳೆಯರು ಇಡೀ ಪ್ರಕೃತಿಯ ಒಂದು ರೂಪಕ ಎಂದು ಬಣ್ಣಿಸಿದ ಅವರು, ನಮ್ಮ ಮಿತಿಯೊಳಗೆ ಏನೆಲ್ಲ ಮಾಡಲು ಸಾಧ್ಯವೋ ಎನ್ನುವುದನ್ನು ಕಂಡುಕೊಳ್ಳಬೇಕು. ಆ ಮೂಲಕ ತಮ್ಮ ಆಸಕ್ತಿಯನ್ನು ಪೋಷಿಸಿ, ಬೆಳೆಸಬೇಕು ಎಂದರು.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶೇ.80 ರಷ್ಟು ಗ್ಯಾರಂಟಿಯೋಜನೆಯನ್ನು ಮೀಸಲಿಟ್ಟಿದ್ದು, ಯಾವುದೇ ಲೋಪದೋಷಗಳಿದ್ದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕನ್ನು ನಡೆಸುವಂತಾಗಬೇಕು ಎಂದು ಹೇಳಿದರು.
ತಾ.ಪಂ.ಇಒ ಶೇಖರ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಅದರಂತೆ ಎಲ್ಲಾ ನಾರಿಯರನ್ನು ಗೌರವದಿಂದ, ಹಕ್ಕು, ಸ್ಥಾನಮಾನ ನೀಡಿ ತೃಪ್ತಿ ಪಡಿಸಿದರೆ ಈ ದೇಶ, ರಾಜ್ಯ ಸಮೃದ್ಧಿಯಾಗುತ್ತದೆ ಎಂದು ಹೇಳಿದರು.ಮಡಿಕೇರಿ ನಗರಸಭೆ ಅಧ್ಯಕ್ಷ ಪಿ.ಕಲಾವತಿ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾ. 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಮತ್ತು ಮಹಿಳೆಯರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ರಾಣಿ ಅವರು ಮಾತನಾಡಿ, ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಪುರುಷರಂತೆ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಎಂ.ಜಿ.ಸುನಿತಾ, ಎಸ್.ಎಸ್.ಹೇಮಂತ್, ಸಂಜೀವಿನಿ ಒಕ್ಕೂಟದ ಪ್ರಮುಖರು ಹಾಗೂ ಸದಸ್ಯರು ಹಾಜರಿದ್ದರು. ರಮ್ಯ ಮೂರ್ನಾಡು ಪ್ರಾರ್ಥಿಸಿದರು, ಚೆಂಬು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಸದಸ್ಯೆ ರೇಖಾ ನಿರೂಪಿಸಿದರು, ಹೊದ್ದೂರು ಗ್ರಾ.ಪಂ. ಪಿಡಿಒ ವತ್ಸಲಾ ಕುಮಾರಿ ಸ್ವಾಗತಿಸಿದರು, ಮೂಕಾಂಬಿಕ ಸಂಜೀವಿನಿ ಒಕ್ಕೂಟದ ಕನಕಾಂಬಿಕೆ ವಂದಿಸಿದರು. ಸ್ಮೀತಾ ಅಮೃತರಾಜ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗ್ರಾ.ಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ 26 ಒಕ್ಕೂಟಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಿವಿಧ ಒಕ್ಕೂಟದ ಸದಸ್ಯರು ಹತ್ತಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಯಿತು.