ರಾಮನಗರ: ಸಮಾಜ ಕಾರ್ಯಕರ್ತರು ಸಮಸ್ಯೆಗಳ ಕಡೆಗೆ ಮುಖಮಾಡಿದಾಗ ಚಿಕ್ಕಪುಟ್ಟ ಸಮಸ್ಯೆಗಳನ್ನು ಪರಿಗಣಿಸದೆ ಸಾರ್ವಜನಿಕವಾಗಿ ಉಪಯೋಗವಾಗುವ ಪ್ರಮುಖ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ಅಂದರೆ ಆಕಾಶಕ್ಕೆ ಏಣಿ ಹಾಕುವುದಕ್ಕೆ ಪ್ರಯತ್ನಿಸಬೇಕು. ಅದು ಮುರಿದುಬಿದ್ದರೂ ಅಡ್ಡಿಯಿಲ್ಲ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಕರೆ ನೀಡಿದರು.
ಸಮಾಜದ ಎಲ್ಲ ಅಂಗಗಳನ್ನೂ ನೋಡುವ ಅವಕಾಶ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗೆ ಮಾತ್ರ ಲಭಿಸುತ್ತದೆ. ಸಮಾಜದ ಎಲ್ಲ ಕ್ಷೇತ್ರಗಳೂ ತಮ್ಮ ಕರ್ತವ್ಯಗಳಲ್ಲಿ ಲೋಪವೆಸಗುತ್ತಿರುವ ಈ ದಿನಗಳಲ್ಲಿ ಯಾವುದೋ ಸಮಾಜ ಕಾರ್ಯಕರ್ತ ಮಾಡುವ ಸಣ್ಣಪುಟ್ಟ ದೋಷಗಳ ಕಡೆಗೆ, ಆರೋಪಗಳ ಕಡೆಗೆ ಗಮನ ಹರಿಸುವ ಬದಲು ಸಾಧ್ಯವಾದಷ್ಟು ಸರಿಪಡಿಸುವ ಕಡೆಗೆ ಗಮನ ಕೊಡಬೇಕು ಎಂದರು.
ಮಹಾತ್ಮ ಜ್ಯೋತಿಬಾಪುಲೆ ಮತ್ತು ಸಾವಿತ್ರಿ ಬಾಯಿಪುಲೆ ಸಾಮಾನ್ಯರಿಗೆ ಶಿಕ್ಷಣ ಕೊಡಿಸುವಲ್ಲಿ ತಮ್ಮ ನಿಷ್ಠೆಯನ್ನು ಮೆರೆದರೇ ಹೊರತು ಅವರಿಗೆ ಬಂದ ಅಡ್ಡಿ ಆತಂಕಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಹಿಂದೆಂದಿಗಿಂತಲೂ ಹೆಚ್ಚು ಕಾಡುತ್ತಿರುವ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವುದಕ್ಕಿಂದ ಅದರ ಜವಾಬ್ದಾರಿಯನ್ನು ನಾವೇ ನಿರ್ವಹಿಸಬೇಕಾದ ಅಗತ್ಯವಿದೆ. ನಮ್ಮ ಕಾಲಘಟ್ಟದಲ್ಲಿ ಅನುಭವಿಸಿರುವ ಮತ್ತು ಪಡೆದಿರುವ ಅನುಭವಗಳು ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು.ತಾವೇ ಸೃಷ್ಟಿಸಿದ ಭಯೋತ್ಪಾದನೆಯನ್ನು ತಾವೇ ಪಸರಿಸಿ, ಇತರ ದೇಶಗಳಲ್ಲಿ ಆತಂಕ ಸೃಷ್ಟಿಸುವ ಈ ಕಾಲಮಾನದಲ್ಲಿ ವೆನಿಜುವೆಲಾ ಅಧ್ಯಕ್ಷನನ್ನು ಅಮೇರಿಕಾ ತನ್ನ ವಶದಲ್ಲಿಟ್ಟುಕೊಳ್ಳುವ ಅಧಿಕಾರವನ್ನು ಕೊಟ್ಟವರಾರು. ಈ ವಿಚಾರಗಳನ್ನು ಪ್ರಶ್ನೆಮಾಡುವ ಅಧಿಕಾರವಿರುವ ವಿಶ್ವಸಂಸ್ಥೆ ಯಾಕೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನಿಸಿದರು.
ಇಫ್ರೊ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಬೈರೇಗೌಡ ಮಾತನಾಡಿ, ಸಮಾಜ ಕಾರ್ಯವೆಂದರೆ ಅದೊಂದು ಯಜ್ಞ. ಒಂದು ವರ್ಗವಲ್ಲ, ಒಂದೇ ಸಮುದಾಯವಲ್ಲ ಹಲವು ಸಮುದಾಯಗಳಿಗೆ ನಿಮ್ಮ ಸೇವೆಯ ಅವಕಾಶ ದೊರೆಯುತ್ತದೆ. ಅಂತಹ ಸದವಕಾಶದಿಂದ ವಂಚಿತರಾಗದೆ ಯಾವುದೇ ಫಲಾಪೇಕ್ಷೆಯಿಲ್ಲದೆ ನಡೆದುಕೊಳ್ಳಬೇಕಾದ್ದು ನಿಮ್ಮ ಕರ್ತವ್ಯವಾಗಬೇಕು ಎಂದರು.
ಶಿಬಿರದಲ್ಲಿ ಕ್ರಿಕೆಟ್ ಟರ‍್ನಮೆಂಟ್ ವಿಜೇತರಾದ ಗಜಪಡೆಯ ಪ್ರೇಕ್ಷಾ ಡಿ.ಎಂ., ಸುಮ ಡಿ.ಸಿ. ಮಧುಪಲ್ಲವಿ, ವಿದ್ಯಾ, ವಿಜಯಕುಮಾರ್, ಆಕಾಶ್ ದೋತ್ರೆ, ಶಶಿಕುಮಾರ್, ಜೀವನ್ ಕೆ. ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಗ್ರಾಮೀಣ ಕ್ರೀಡಾಕೂಟದಲ್ಲಿ ಮೇದರದೊಡ್ಡಿಯ ಅನಿತ, ಪವಿತ್ರ, ರಮ್ಯ, ಅಭಿ, ಪುಷ್ಪಲತಾ ಚಿಕು, ವೆಂಕಟಾಚಲ, ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ ಶಿಬಿರಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಿಬಿರ ನಿರ್ದೇಶಕ ಪ್ರೊ.ಆರ್.ಶಿವಪ್ಪ, ಶಿಬಿರ ಸಂಚಾಲಕ ಮುಖೇಶ್ ಪವನ್‌ಕುಮಾರ್, ಪ್ರೊ.ಎಚ್.ಪಿ.ಜ್ಯೋತಿ, ಪ್ರೊ.ಚಂದ್ರಮೌಳಿ ಉಪಸ್ಥಿತರಿದ್ದರು.7ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಮೈಸೂರು ವಿವಿ ಸಮಾಜಕಾರ್ಯ ವಿಭಾಗ ಹಮ್ಮಿಕೊಂಡಿದ್ದ ಸಹಭಾಗಿತ್ವ ಸಮಾಜಕಾರ್ಯ ಶಿಬಿರದ ಸಮಾರೋಪದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ವಿಜೇತರಿಗೆ ಬಹುಮಾನ ವಿತರಿಸಿದರು.