ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಏ.೭ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಅರವಿಂದ ಕೊಪ್ಪ ಹೇಳಿದರು.ಪಟ್ಟಣದ ಎಪಿಎಂಸಿಯಲ್ಲಿ ನಡೆದ ತಾಲೂಕು ಪಂಚಮಸಾಲಿ ಸಮಾಜ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಸರಿಯಲ್ಲ. ಇದರಿಂದ ಬಿಜೆಪಿಗೆ ತುಂಬ ನಷ್ಟವಾಗಲಿದೆ. ಅಲ್ಲದೇ ಹಿಂದೂ ಸಮಾಜ ಬಾಂಧವರಿಗೆ ತುಂಬಾ ನೋವುಂಟಾಗಿದೆ. ರಾಜ್ಯದಲ್ಲಿ ಬಿಜೆಪಿ ಅಪ್ಪ ಮಕ್ಕಳ ಪಕ್ಷವೆಂದು ಹೆಸರು ಪಡೆಯುತ್ತಿದೆ. ಅದನ್ನು ಬದಲಿಸುವ ಕೆಲಸ ಬಿಜೆಪಿ ವರಿಷ್ಠರು ಮಾಡಬೇಕು, ಅದನ್ನು ಬಿಟ್ಟು ನಿಷ್ಠುರವಾದಿ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವದು ಎಷ್ಟು ಸರಿ ?. ಯತ್ನಾಳ ಒಬ್ಬಂಟಿಗರೆಂದು ತಿಳಿಯಬೇಡಿ. ಅವರ ಪರ ಹಿಂದು ಸಂಘಟನೆಗಳು ಬೆನೆನಲುಬಾಗಿ ನಿಂತಿವೆ, ಇದನ್ನು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಪಕ್ಷದ ವರಿಷ್ಠರು ಅರ್ಥೈಸಿಕೊಳ್ಳಬೇಕು. ಉಚ್ಚಾಟಿಸಿದ ದಿನದಿಂದಲೂ ರಾಜ್ಯಾಧ್ಯಂತ ಹಿಂದು ಕಾರ್ಯಕರ್ತರು ಹೋರಾಟ ನಡೆಸುವ ಮೂಲಕ ಯತ್ನಾಳ ಅವರ ಜೊತೆಗಿದ್ದೇವೆ ಎಂಬ ಸಂದೇಶ ನೀಡುತ್ತಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದು ಕಾರ್ಯಕರ್ತರು, ಯತ್ನಾಳ ಅಭಿಮಾನಿಗಳು ಏ.೭ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬನಶಂಕರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕಿತ್ತೂರು ಚನ್ನಮ್ನ ವೃತ್ತಕ್ಕೆ ಆಗಮಿಸಿ ಭಹಿರಂಗ ಸಭೆ ನಡೆಸಲಾಗಿವುದು. ಯತ್ನಾಳ ಅಭಿಮಾನಿಗಳು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಸಮಾಜ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಅಮರೇಶ ಗೂಳಿ, ಯುವ ಘಟಕದ ಅಧ್ಯಕ್ಷ ರವಿ ಕಮತ, ಶಿವಶಂಕರಗೌಡ ಹಿರೇಗೌಡರ, ಕಾಮರಾಜ ಬಿರಾದರ, ವಿರೇಶ ಹಡಲಗೇರಿ, ವಿರೇಶ ಢವಳಗಿ, ಸಂಗಮೇಶ ಹಾರಿವಾಳ, ಬಸಲಿಂಗಪ್ಪ ರಕ್ಕಸಗಿ, ಮಹಾಂತೇಶ ನಿಡಗುಂದಿ, ಶರಣು ಸಾಲವಾಡಗಿ, ಅನೀಲ ಪಾಟೀಲ, ವಿರೇಶ ಬಲದಿನ್ನಿ, ಸಚಿನ ಚಿನ್ನಾಪೂರ, ಅಮರೇಶ ಕೋಳೂರ ಸೇರಿ ಹಲವರು ಇದ್ದರು.