ಧಾರವಾಡ: ಸಮಾಜದಲ್ಲಿ ಶಾಂತಿ, ಸಹೋದರತ್ವ, ಸಾಮರಸ್ಯ ಸ್ಥಾಪಿಸಲು ಗುರುಗಳ, ದಾರ್ಶನಿಕರ ಮಾರ್ಗದರ್ಶನ ಅಗತ್ಯವಿದೆ. ಇಂದು ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳದರೂ ನಮ್ಮ ಮನಸ್ಸಿನ ಮಲೀನತೆ ತೊಳೆದು ಸಂಸ್ಕೃತಿ, ಸಂಸ್ಕಾರಗಳನ್ನು ಬೆಳಸಲು ಗುರುವರ್ಯರ ಮಾರ್ಗದರ್ಶನ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಶಿಕ್ಷಣ, ಸಮಾಜ ಕಾರ್ಯಕ್ರಮಗಳಲ್ಲಿ ಸಾಕಷ್ಟು ಮುಂದುವರೆದಿದ್ದೇವೆ. ಈಗಿನ ತಂತ್ರಜ್ಞಾನದಲ್ಲಿ ಉತ್ತುಂಗ ಸ್ಥಿತಿ ತಲುಪುತ್ತಿದ್ದೇವೆ. ಆದರೆ, ರೇಣುಕಾಚಾರ್ಯರಂತಹ ದಾರ್ಶನಿಕರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ಇರುತ್ತಿತ್ತು. ನಾವು ಮಾಲಿನ್ಯ ಮಾಡಿಕೊಂಡ ಮನಸ್ಸನ್ನು ಸ್ವಚ್ಚಗೊಳಿಸುವುದು ರೇಣುಕಾಚಾರ್ಯರು ಹಾಕಿಕೊಟ್ಟ ಮಾರ್ಗ, ತಿಳಿಸಿದ ತತ್ವಗಳ ಸಹಾಯದಿಂದ ಸಾಧ್ಯವಾಗುತ್ತದೆ. ಅವರು ಎಲ್ಲರೂ ಸಮಾನರು ಎಂಬ ಮನೋಭಾವ ಬೆಳೆಸಿದ್ದರು ಎಂದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ತತ್ವಶಾಸ್ತ್ರ, ಭಕ್ತಿ ಮತ್ತು ಜ್ಞಾನವನ್ನು ಸಮಾನವಾಗಿ ಬೆಳೆಸಿ, ಸಮಾನತೆ ಮತ್ತು ಶುದ್ಧ ಜೀವನದ ಸಂದೇಶವನ್ನು ರೇಣುಕರು ಸಾರಿದರು. ಅವರ ಶಿಷ್ಯರು ಮತ್ತು ಅನುಯಾಯಿಗಳು, ಅವರ ಮಾರ್ಗದರ್ಶನವನ್ನು ಅನುಸರಿಸಿ, ಸಮಾಜದಲ್ಲಿ ಅಂಧಕಾರವನ್ನು ದೂರ ಮಾಡುವ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯರು ಆರ್ಶಿವಚನ ನೀಡಿದರು. ಹುಡಾ ಅಧ್ಯಕ್ಷ ಶಾಕೀರ್ ಸನದಿ ಮಾತನಾಡಿ, ಮಾನವರು ಮಾನವರಿಗೆ ಸಹಾಯ ಮಾಡಿದರೆ ಮಾನವ ಧರ್ಮಕ್ಕೆ ಜಯವಾಗುತ್ತದೆ ಎಂದರು. ವೇದಿಕೆಯಲ್ಲಿದ್ದ ಬಂಗಾರೀಶ ಹಿರೇಮಠ, ಸರೋಜ ಪಾಟೀಲ ಅವರು ಮಾತನಾಡಿದರು.
ಗಣ್ಯರಾದ ಗುರುರಾಜ ಹುಣಸಿಮರದ, ಶರಣಪ್ಪ ಕೊಟಬಾಗಿ, ಡಿ.ಎಂ. ಹಿರೇಮಠ, ಮಂಜುನಾಥ ಹಿರೇಮಠ, ಬಸವರಾಜ್ ಕಟ್ಟಿಮಠ, ವಿಜಯಲಕ್ಷ್ಮೀ ಲೂಥಿಮಠ ಹಾಗೂ ಶಶಿಕಲಾ ಶಾಸ್ತ್ರಿಮಠ ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.