ಜನರಿಗಾಗಿ ದುಡಿಯುವ ವೈದ್ಯಸಮೂಹಕ್ಕೆ ಸಮಾಜ ಋಣಿ

KannadaprabhaNewsNetwork | Published : Jul 6, 2024 12:49 AM

ಸಾರಾಂಶ

ಗುಣಪಡಿಸುವ ಕೈಗಳು, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ನ್ಯಾಯಾಂಗದಿಂದ ವೈದ್ಯರ ದಿನಾಚರಣೆಯಲ್ಲಿ ನ್ಯಾ.ರಾಜೇಶ್ವರಿ ಹೆಗಡೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಣಪಡಿಸುವ ಕೈಗಳು, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಜಿಲ್ಲಾ ನ್ಯಾಯಾಂಗದಿಂದ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒತ್ತಡದ ಜೀವನಶೈಲಿಗೆ ಮನುಷ್ಯರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯ ಸಮೂಹದ ಮುಂದೆಯೂ ಸವಾಲುಗಳಿವೆ. ಕಾಲಕಾಲಕ್ಕೆ ವೈದ್ಯಕೀಯ ಲೋಕ ಸಂಬಂಧಿತ ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ, ಉಪನ್ಯಾಸಗಳ ಮೂಲಕ ಜನರನ್ನು ತಲುಪಬೇಕಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ನ್ಯಾಯಾಂಗದಿಂದ ವೈದ್ಯರನ್ನು ಕರೆಸಿ, ಸನ್ಮಾನಿಸಿರುವುದು ನಮ್ಮಲ್ಲಿ ಮತ್ತಷ್ಟು ಜವಾಬ್ದಾರಿ ಹಾಗೂ ನೈತಿಕಪ್ರಜ್ಞೆ ಮೂಡಲು ಕಾರಣವಾಗಿದೆ ಎಂದು ತಿಳಿಸಿದರು.

ಡಾ.ಶಾಂತಾ ಭಟ್ ಮಾತನಾಡಿ, ಇಂದಿನ ನಾಗರಿಕ ಸಮಾಜ ನಾಗಾಲೋಟದಿಂದ ಓಡುತ್ತಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ಸಂಪರ್ಕ ಸಾಧನಗಳು ಜನರಲ್ಲಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶ ರವಾನಿಸುತ್ತಿರವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

ಡಾ.ರಾಘವನ್ ಮಾತನಾಡಿ, ಸಮಾಜದಲ್ಲಿ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳಿಗಿಂತಲೂ ಹೆಚ್ಚಾಗಿ ಇಂದಿನ ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡಗಳಿಂದಾಗಿ ಮರಣ ಹೊಂದುವವರ ಸಂಖ್ಯೆ ಗಣನೀಯವಾಗಿದೆ. ಇದು ಪ್ರಸ್ತುತ ಶೇ.67ರ ಪ್ರಮಾಣದಲ್ಲಿದೆ ಈ ಕುರಿತಂತೆ ಯುವಜನತೆಯಲ್ಲಿ ಅರಿವನ್ನು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಮುಖ್ಯಮಂತ್ರಿ ಅವರಿಂದ ಪ್ರಶಂಸೆಗೆ ಪಾತ್ರರಾಗಿ, ಅನುಪಮ ಸೇವೆಗೆ ಗಿ ಪ್ರಶಸ್ತಿ ಪುರಸ್ಕೃತರಾದ ಡಾ.ರಾಘವನ್ ಮತ್ತು ಡಾ.ನಾಗೇಂದ್ರಪ್ಪ ಅವರನ್ನು ಅಭಿನಂದಿಸಲಾಯಿತು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ, ಡಾ. ರೇಣುಕಾರಾಧ್ಯ, ಸುಭಾಶ್ಚಂದ್ರ, ನ್ಯಾಯಾಧೀಶರಾದ ಪ್ರವೀಣಕುಮಾರ್, ಶ್ರೀರಾಮ ಹೆಗಡೆ, ಶಿವಪ್ಪ ಸಲಗರೆ, ನಿವೇದಿತಾ ಹಾಗೂ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ, ಕೋರ್ಟ್ ಮ್ಯಾನೇಜರ್ ಅಶ್ವಿನಿ ಕುಮಾರ್ ಹಾಗೂ ನ್ಯಾಯಾಂಗ ಸಿಬ್ಬಂದಿ ಹಾಜರಿದ್ದರು.

- - -

ಕೋಟ್‌ ವೈದ್ಯರ ಮಾನವೀಯ ದೃಷ್ಟಿಯಿಂದಾಗಿಯೇ ಅರ್ಧದಷ್ಟು ಬಡವರ ಕಾಯಿಲೆಗಳು ವಾಸಿಯಾಗಬಲ್ಲವು. ಶ್ರೀಮಂತ ರೋಗಿಗೆ ಡಾಕ್ಟರ್ ಆಗಿ ಕಂಡ ಅದೇ ವೈದ್ಯ, ಬಡವನಿಗೆ ದೇವರಾಗಿ ಕಾಣಿಸುತ್ತಾನೆ. ಇಂಥಹ ಸ್ತುತ್ಯ ಕಾರ್ಯಕ್ಕೆ ವೈದ್ಯರನ್ನು ಅಭಿನಂದಿಸುತ್ತೇನೆ

- ಮಂಜಪ್ಪ ಅಣ್ಣಯ್ಯನವರ್‌, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ

- - - -ಫೋಟೋ:

ದಾವಣಗೆರೆಯಲ್ಲಿ ಜಿಲ್ಲಾ ನ್ಯಾಯಾಂಗದಿಂದ ಆಯೋಜಿಸಲಾಗಿದ್ದ ವೈದ್ಯರ ದಿನ ಕಾರ್ಯಕ್ರಮದಲ್ಲಿ ನ್ಯಾ.ರಾಜೇಶ್ವರಿ ಎನ್. ಹೆಗಡೆ ಮಾತನಾಡಿದರು.

Share this article