ಕುಕನೂರು:
ಪಟ್ಟಣದ ಶ್ರೀಅನ್ನದಾನೇಶ್ವರಮಠಕ್ಕೆ ಮಹಾದೇವ ಸ್ವಾಮೀಜಿ ಆಗಮಿಸಿದ ಬಳಿಕ ದಾನಿಗಳು, ಭಕ್ತರು, ರಾಜಕಾರಣಿಗಳಿಂದ ದೇಣಿಗೆ ಸಂಗ್ರಹಿಸಿ ಇಂದು ದೊಡ್ಡಮಠವನ್ನಾಗಿ ನಿರ್ಮಿಸಿದ್ದಾರೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಗುರುವಾರ ನಡೆದ ಅನ್ನದಾನೀಶ್ವರ ಮಹಾಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ೧೧ ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭೂಮಿ ಮೇಲೆ ಯಾರು ಶಾಶ್ವತವಾಗಿ ಉಳಿಯಬೇಕೆಂದು ಬಂದಿಲ್ಲ. ಇರುವಷ್ಟು ದಿನ ಕೈಲಾದ ಸಹಾಯ, ಸಹಕಾರ ಮಾಡಬೇಕು. ಅಂದಾಗ ಜೀವನಕ್ಕೆ ಅರ್ಥ ಬರುತ್ತದೆ. ಇತ್ತೀಚೆಗೆ ಬರಿ ಜಾತಿ ವ್ಯವಸ್ಥೆಯಿಂದ ಸಮಾಜ ನಲುಗುತ್ತಿದೆ. ಅದರಿಂದ ಜನರು ಹೊರಬರಬೇಕಾಗಿದೆ ಎಂದು ಕರೆ ನೀಡಿದರು.ಶ್ರೀಮಠ ಮಹಾದೇವ ಸ್ವಾಮೀಜಿ ಮಾತನಾಡಿ, ನೂತನ ರಥ ನಿರ್ಮಾಣಕ್ಕೆ ಬಡವರಿಂದ ಹಿಡಿದು ಎಲ್ಲ ವರ್ಗದವರು ಸಹಾಯ-ಸಹಕಾರ ಮಾಡಿದ್ದರಿಂದ ಇಂತಹ ದೊಡ್ಡ ಪ್ರಮಾಣದಲ್ಲಿ ರಥ ನಿರ್ಮಿಸಲು ಸಾಧ್ಯವಾಗಿದೆ. ಹಣ ಇದ್ದವರು ಈಗ ಕೂಡುವುದು ಬಹಳ ವಿರಳ ಎಂದರು.
ಪ್ರಶಸ್ತಿ ಪ್ರದಾನ:ವೀರಣ್ಣ ಅಣ್ಣಿಗೇರಿ ಅವರಿಗೆ ಬಸವಶ್ರೀ ಪ್ರಶಸ್ತಿ, ನಿವೃತ್ತ ಉಪಕುಲಪತಿ ಎಚ್.ಡಿ. ಪಾಟೀಲ್ ಅವರಿಗೆ ಅನ್ನದಾನೀಶ್ವರ ಪ್ರಶಸ್ತಿ, ನಿವೃತ್ತ ಶಿಕ್ಷಕ ಶರಣಪ್ಪ ಕೊಪ್ಪದಗೆ ಗುದ್ನೇಶ್ವರ ಪ್ರಶಸ್ತಿ, ನೂತನ ರಥ ಶಿಲ್ಪಿಗಳಾದ ಶರಣಕುಮಾರ ವಿಶ್ವಕರ್ಮ, ರಥದ ಗಾಲಿ ಶಿಲ್ಪಿಗಳಾದ ಕಲ್ಲಪ್ಪ ಭೋವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ವೀರಯ್ಯ ತೊಂಟದರ್ಯಮಠ, ಗದಿದೆಪ್ಪ ಪಾವಡಶೆಟ್ಟಿ, ಈರಪ್ಪ ಮ್ಯಾಳಿ, ಈರಪ್ಪ ಗಾವರಾಳ, ಬಸವರಾಜ ಮಾಸೂರು, ಕರಬಸಯ್ಯ ಬಿನ್ನಾಳ, ಪ್ರಭು ಶಿವಶಿಂಪರ, ಸದಸ್ಯರಾದ ಶೇಖಪ್ಪ ಶಿರೂರು, ಕಾಶಿಮ್‌ಸಾಬ ಸಂಗಟಿ, ಈರಪ್ಪ ಗುತ್ತಿ, ಚನ್ನಬಸಯ್ಯ, ಈಶಯ್ಯ ಶಿರೂರುಮಠ ಸೇರಿದಂತೆ ಅನೇಕರು ಇದ್ದರು.