ಭಕ್ತಿ, ಜ್ಞಾನದ ಸಮ್ಮಿಲನದೊಂದಿಗೆ ಸಮಾಜ ಕಟ್ಟಬೇಕು: ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ

KannadaprabhaNewsNetwork |  
Published : Apr 28, 2025, 12:50 AM IST
27ಕೆಎಂಎನ್‌ಡಿ-7 ತಾಲೂಕಿನ ವಳಗೆರೆ ಮೆಣಸ ಗ್ರಾಮದ ವೀರಾಂಜನೇಯ ಸ್ವಾಮಿ ದೇವಾಲಯದ ಹರಿಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗೆ ಗ್ರಾಮಸ್ಥರು ಪುಷ್ಪ ನಮನ ಸಲ್ಲಿಸಿದರು. | Kannada Prabha

ಸಾರಾಂಶ

ಅತಿವೃಷ್ಟಿಯಿಂದ ಒಡೆದು ಹೋಗಿರುವ ಕೆ.ಆರ್.ಪೇಟೆ ತಾಲೂಕಿನ ಕೆರೆಗಳನ್ನು ಇದುವರೆಗೂ ಪುನರ್ ನಿರ್ಮಿಸಿಲ್ಲ. ಕೆರೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಸಲ್ಲದು. ಜಿಲ್ಲೆಯಲ್ಲಿ ೧೪೮೩ ಕಂದಾಯ ಗ್ರಾಮಗಳಿದ್ದು ೯೬೩ ದೊಡ್ಡ ಕೆರೆಗಳಿವೆ. ರಾಜ್ಯ ಸರ್ಕಾರ ಶ್ರೀಮಂತರ ಮೋಜಿನ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಬಳಕೆ ನಿಲ್ಲಿಸಿ ಕೆರೆಗಳ ಅಭಿವೃದ್ಧಿಗೆ ಹಣ ಖರ್ಚುಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಭಕ್ತಿ ಮತ್ತು ಜ್ಞಾನದ ಸಮ್ಮಿಲನದ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಅವರು ತಾಲೂಕಿನ ವಳಗೆರೆ ಮೆಣಸ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಹರಿಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮ ಬೋಧನೆಯೊಂದೇ ಸ್ವಾಮೀಜಿಗಳ ಕೆಲಸವಲ್ಲ. ಆಚಾರ, ವಿಚಾರ ಮತ್ತು ಜೀವಚರದ ಮೂಲಕ ಧರ್ಮದ ತಳಹದಿಯಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು. ನಮ್ಮದು ಭಕ್ತಿ ಪ್ರಧಾನ ದೇಶ. ಆದರೆ ಭಕ್ತಿಯೊಂದೇ ಮೋಕ್ಷಕ್ಕೆ ದಾರಿಯಲ್ಲ. ಭಕ್ತಿಯ ಜೊತೆಗೆ ಜ್ಞಾನವೂ ಇರಬೇಕು. ಜ್ಞಾನದ ಬಲದಿಂದ ಅಜ್ಞಾನವನ್ನು ನಾಶ ಮಾಡುವ ಮೂಲಕ ಸರ್ವ ಸಮಾಜವನ್ನು ಮೋಕ್ಷದ ಕಡೆಗೆ ಕರೆದೊಯ್ಯುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು ಎಂದು ಹೇಳಿದರು.

ಆಚಾರಕ್ಕೆ ದೇವಾಲಯಗಳಿರಬೇಕು. ಎಲ್ಲಿ ದೇವಾಲಯಗಳು ಇರುತ್ತವೆಯೋ ಅಲ್ಲಿ ಸಂಸ್ಕೃತಿ, ಆಚರಣೆಗಳಿರುತ್ತವೆ. ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳಿಂದಾಗಿಯೇ ಭಾರತೀಯ ಸಂಸ್ಕೃತಿ ಉಳಿದಿದೆ. ದೇವಾಲಯಗಳಿಗೆ ಹೋಗಬೇಡಿ ಎನ್ನುವವನು ಅಜ್ಞಾನಿ. ನಮ್ಮ ದೇವಾಲಯಗಳು ಆಚಾರದ ಕೆಂದ್ರಗಳಾಗುವ ಜೊತೆಗೆ ವಿಚಾರದ ಕೇಂದ್ರಗಳಾಗಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ನಾಶ ಮಾಡಬೇಕು ಎಂದರು.

ಕೆರೆ ಬಜೆಟ್ ಮಂಡಿಸಿ:

ಅತಿವೃಷ್ಟಿಯಿಂದ ಒಡೆದು ಹೋಗಿರುವ ಕೆ.ಆರ್.ಪೇಟೆ ತಾಲೂಕಿನ ಕೆರೆಗಳನ್ನು ಇದುವರೆಗೂ ಪುನರ್ ನಿರ್ಮಿಸಿಲ್ಲ. ಕೆರೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಸಲ್ಲದು. ಜಿಲ್ಲೆಯಲ್ಲಿ ೧೪೮೩ ಕಂದಾಯ ಗ್ರಾಮಗಳಿದ್ದು ೯೬೩ ದೊಡ್ಡ ಕೆರೆಗಳಿವೆ. ರಾಜ್ಯ ಸರ್ಕಾರ ಶ್ರೀಮಂತರ ಮೋಜಿನ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಬಳಕೆ ನಿಲ್ಲಿಸಿ ಕೆರೆಗಳ ಅಭಿವೃದ್ಧಿಗೆ ಹಣ ಖರ್ಚುಮಾಡಬೇಕು. ಒಂದು ವರ್ಷಕ್ಕೆ ೨೦೦ ಕೆರೆಯಂತೆ ಐದು ವರ್ಷಗಳ ಕಾಲ ಪಂಚ ವಾರ್ಷಿಕ ಯೋಜನೆ ಮಾದರಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡಿದರೆ ರಾಜ್ಯದ ಎಲ್ಲಾ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಕೆರೆಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಿ ಕೇಂದ್ರ ಸರ್ಕಾರವೂ ಕೆರೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಐದು ವರ್ಷಗಳ ಕಾಲ ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಹಾಕುವುದನ್ನು ನಿಲ್ಲಿಸಿಯಾದರೂ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಿ. ಕೆರೆಗಳ ಅಭಿವೃದ್ಧಿಗಾಗಿ ವಿಶೇಷ ಬಜೆಟ್ ಮಂಡಿಸುವಂತೆ ಸ್ವಾಮೀಜಿಗಳು ಆಗ್ರಹಿಸಿದರು.

ಸಮಾಜ ಸೇವಕ ವಿಜಯ ರಾಮೇಗೌಡ ಮಾತನಾಡಿ, ದೇಶ ಕಟ್ಟುವುದರಿಂದ ಹಿಡಿದು ದಾರಿ ತಪ್ಪಿದ ಸಮಾಜವನ್ನು ತಿದ್ದಿ ಮುನ್ನಡೆಸಲು ಮಠಾಧೀಶರು ಮಾರ್ಗದರ್ಶಕರಾಗಬೇಕು. ದೇಶ ತಂತ್ರಜ್ಞಾನದಲ್ಲಿ ಎಷ್ಟೇ ಮುನ್ನಡೆದಿದ್ದರೂ ಧರ್ಮ ಮತ್ತು ಸಂಸ್ಕಾರ ಮರೆತರೆ ನಮಗೆ ಮೋಕ್ಷ ಸಿಗುವುದಿಲ್ಲ ಎಂದರು.

ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆ ವಹಿಸಿದ್ದರು, ತಾಪಂ ಮಾಜಿ ಸದಸ್ಯರಾದ ಮಾಧವ ಪ್ರಸಾದ್, ಮಹದೇವೇಗೌಡ, ಬಲ್ಲೇನಹಳ್ಳಿ ರಮೇಶ್, ಗ್ರಾಮಾಂತರ ಪೊಲೀಸ್ ನಿರೀಕ್ಷಕಿ ಸುಮಾರಾಣಿ, ಮುಖಂಡರಾದ ನಾಗೇಂದ್ರ, ರಮಾನಂದ, ಸೋಮಶೇಖರ್, ನೇತ್ರಾವತಿ, ಶಶಿರೇಖಾ ಸೇರಿದಂತೆ ಇತರರಿದ್ದರು.

ಗ್ರಾಮಕ್ಕೆ ಆಗಮಿಸಿದ ನಿಶ್ಚಲಾನಂದನಾಥ ಶ್ರೀಗಳನ್ನು ಬೆಳ್ಳಿ ಸಾರೋಟಿನ ಮೂಲಕ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತಂದ ಗ್ರಾಮಸ್ಥರು, ಪಾದ ಪೂಜೆ ಮತ್ತು ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ