- ಡಾ. ಗುರುಬಸವ ಮಹಾಸ್ವಾಮೀಜಿ ಸಲಹೆ । ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಸರ್ವಧರ್ಮ ವಧು-ವರರ ಸಮಾವೇಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಸಮಾಜದಲ್ಲಿ ಉತ್ತಮ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ರಾಜ್ಯಮಟ್ಟದ ಬೃಹತ್ ಸರ್ವಧರ್ಮ ವಧು-ವರರ ಸಮಾವೇಶಗಳು ಇಂದಿನ ಕಾಲಘಟ್ಟದ ಅಗತ್ಯವಾಗಿವೆ. ಜಾತಿ-ಪಂಗಡಗಳ ಬೇಧ ಮರೆತು ಸರಳ ಜೀವನ ಹಾಗೂ ಸರಳ ವಿವಾಹಗಳಿಗೆ ಆದ್ಯತೆ ನೀಡುವ ಮೂಲಕ ಕುಟುಂಬ ಮತ್ತು ಸಮಾಜವನ್ನು ಸದೃಢಗೊಳಿಸಬೇಕಾಗಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಪೀಠಾಧ್ಯಕ್ಷರಾದ ಡಾ. ಗುರುಬಸವ ಮಹಾಸ್ವಾಮೀಜಿ ತಿಳಿಸಿದರು.ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಬೃಹತ್ ಸರ್ವಧರ್ಮ ವಧು-ವರರ ಸಮಾವೇಶ ಹಾಗೂ ಪಾಲಕರ ನೇರ ಸಂಪರ್ಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಂದಿನ ವಧು-ವರರ ವೇದಿಕೆ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಸರ್ವಜನಾಂಗದ ವಿವಾಹಯೋಗ್ಯ ಯುವಕ- ಯುವತಿಯರಿಗೆ ಉತ್ತಮ ಜೀವನ ಸಂಗಾತಿ ಹುಡುಕಿಕೊಡುವ ಮಾನವೀಯ ವೇದಿಕೆಯಾಗಿ ರೂಪುಗೊಂಡಿದೆ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಗ್ರಾಮೀಣ ಹಾಗೂ ರೈತ ಕುಟುಂಬಗಳ ಯುವಕರಿಗೆ ಸಂಬಂಧಗಳು ಸಿಗುವುದು ಸವಾಲಾಗುತ್ತಿದೆ. ರೈತ ಕುಟುಂಬಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಕೃಷಿಯನ್ನೂ ಗೌರವಯುತ ವೃತ್ತಿಯಾಗಿ ಪರಿಗಣಿಸುವ ಮನೋಭಾವ ಬೆಳೆಸಬೇಕು. ಇಂತಹ ವಧು-ವರರ ಸಮಾವೇಶಗಳು ಕುಟುಂಬಗಳ ನಡುವೆ ನೇರ ಸಂಪರ್ಕ ಬೆಳೆಸಿ, ಉತ್ತಮ ಸಂಬಂಧಗಳ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 251ಕ್ಕೂ ಹೆಚ್ಚು ವಧುಗಳು, 600ಕ್ಕೂ ಹೆಚ್ಚು ವರರು, ಅವರ ಪಾಲಕರು ಹಾಗೂ ಬಂಧು-ಬಳಗ ಸೇರಿದಂತೆ ಸಾವಿರಾರು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಸಮುದಾಯಗಳ ಕುಟುಂಬಗಳು ಪರಸ್ಪರ ಭೇಟಿ ಮಾಡಿ, ಮಾಹಿತಿ ವಿನಿಮಯ ಮಾಡಿಕೊಂಡು ಭವಿಷ್ಯದ ವೈವಾಹಿಕ ಸಂಬಂಧಗಳ ಕುರಿತು ಚರ್ಚೆ ನಡೆಸಿದವು. ಸಮಾವೇಶದಲ್ಲಿ ನೋಂದಣಿ, ಮಾಹಿತಿ ಕೇಂದ್ರ, ಸಲಹಾ ಕೇಂದ್ರ ಹಾಗೂ ಪರಸ್ಪರ ಸಂಪರ್ಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿತ್ತು.
-8ಕೆಸಿಎನ್‌ಜಿ1: ಸಮಾರಂಭವನ್ನು ಡಾ. ಗುರುಬಸವ ಮಹಾಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಗಣ್ಯರು ಇದ್ದರು.