ಗದಗ: ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಕೋಮುವಾದ ಬಿತ್ತುತ್ತಿರುವ ಕುಲಪತಿ ಸೇರಿದಂತೆ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಮೃದು ಹಿಂದುತ್ವ ಧೋರಣೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ಅವರು ಗುರುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಜನರು ಬಿಜೆಪಿಯ ಕೋಮುವಾದದ ಆಡಳಿತವನ್ನು ತಿರಸ್ಕರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಕೂಡಾ ಚುನಾವಣೆಯಲ್ಲಿ ಇದನ್ನೇ ಹೇಳಿತ್ತು. ಆದರೆ ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಎಚ್.ಕೆ. ಪಾಟೀಲ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರು ತಮ್ಮ ಪಕ್ಷದ ತತ್ವ ಸಿದ್ಧಾಂತಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂದರು.ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಹಲವಾರು ಪ್ರಕರಣಗಳನ್ನು ಗಮನಿಸಿದಾಗ ಅಲ್ಲಿನ ಕುಲಪತಿ ಆರ್‌ಎಸ್‌ಎಸ್ ಸಂಘಟನೆಯ ಸರ ಸಂಘಚಾಲಕರಂತೆ ವರ್ತಿಸುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಕಾನೂನು ಸಚಿವರು ಗಮನ ನೀಡದೇ ಸುಮ್ಮನೆ ಕುಳಿತುಕೊಳ್ಳುವ ಮೂಲಕ ಪರೋಕ್ಷವಾಗಿ ಸಾಥ್ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
17ರ ವಚನ ದರ್ಶನ ತಡೆಯಲಿಗದಗ: ಗದಗ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಡಿ. 17 ರಂದು ವಚನ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮವನ್ನು ಕೋಮುವಾದ ಬಿತ್ತುವ ಸಂಘಟನೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಒಡೆಯುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಕ್ರಾರ್ಯಕ್ರಮವನ್ನು ರದ್ದು ಪಡಿಸಬೇಕು ಎಂದು ಬಸವರಾಜ ಸೂಳಿಭಾವಿ ಹೇಳಿದರು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಗದಗಕ್ಕೆ ಬಂದಾಗ ಜಿಲ್ಲೆಗೆ ಹೆಮ್ಮೆ, ಗೌರವ ಬಂದಿದೆ ಎನ್ನುವ ನಂಬಿಕೆ ಇತ್ತು. ಕೃಷಿ ವಿಶ್ವವಿದ್ಯಾಲಗಳಿಗೆ ಪೂರಕವಾದ ವಿಶ್ವವಿದ್ಯಾಲಯ ಇದಾಗಿದ್ದು, ಈ ನೆಲದ ಜನತೆಗೆ, ಗ್ರಾಮೀಣ ಜನತೆಗೆ ಪೂರಕವಾಗಿ ಕೇಲಸ ಮಾಡಬೇಕು ಎನ್ನುವ ಉದ್ದೇಶದಿಂದ ಸಚಿವ ಎಚ್.ಕೆ. ಪಾಟೀಲ ವಿಶ್ವವಿದ್ಯಾಲಯ ಆರಂಭ ಮಾಡಿದ್ದರು. ಆದರೆ, ಅಲ್ಲಿ ಕೆಲಸ ಮಾಡುವ ಕುಲಪತಿ, ಅಧಿಕಾರಿಗಳು ಅದರ ಮೂಲ ಉದ್ದೇಶ ಮರೆತು ವಿದ್ಯಾರ್ಥಿಗಳಲ್ಲಿ ಕೊಮುವಾದ ಬೆಳೆಸುವ ಚಟುವಟಿಕೆ ಮಾಡುತ್ತಿರುವುದು ಖಂಡನಿಯ.ಗ್ರಾಮೀಣಾಭಿವೃದ್ದಿ ವಿವಿ ಕುಲಪತಿ ಡಾ ವಿಷ್ಣುಕಾಂತ್ ಚಟಪಲ್ಲಿ ಹಾಗೂ ಜೀಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ, ಒಂದು ಧರ್ಮದ ಪರವಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡುತ್ತಿರುವ ಅವರು ಕೊಮುವಾದದ ಅಂಗ ಸಂಸ್ಥೆಯ ಜೊತೆ ಕೈ ಜೊಡಿಸಿದ್ದು ಖಂಡನಿಯ.
ಡಿ 17ರಂದು ನಡೆಯುವ ಕಾರ್ಯಕ್ರಮವು ಬಸವಣ್ಣನವರನ್ನು ಹಿಂದೂ ಧರ್ಮದ ಭಾಗವಾಗಿಸಲು ಮಾಡುತ್ತಿರುವ ಕುಟಿಲ ತಂತ್ರವಾಗಿದೆ. ಇದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿದೆ. ಲಿಂಗಾಯತ ಎನ್ನುವುದು ಒಂದು ಪ್ರತ್ಯೇಕ ಧರ್ಮವಾಗಿದ್ದು, ಇದನ್ನು ಒಡೆಯುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದುತ್ವ ಹಾಗೂ ಆರ್.ಎಸ್.ಎಸ್ ಪ್ರತಿಪಾದಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ದುರಂತ ಸಂಗತಿಯಾಗಿದೆ ಎಂದರು.ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳನ್ನು ಆಹ್ವಾನಿಸಲಾಗಿದೆ. ಆದರೆ, ತೋಂಟದಾರ್ಯ ಮಠ ಲಿಂಗಾಯತ ಪರಂಪರೆಯುಳ್ಳ ಮಠಗಳಲ್ಲಿ ಒಂದಾಗಿದ್ದು ಅಂತವರು ಈ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಸರಿಯಲ್ಲ ಎಂದು ಅವರು, ಶ್ರೀಗಳು ಈ ಕಾರ್ಯಕ್ರಮಕ್ಕೆ ತೆರಳಿದರೆ ಮಠದ ಮುಂದೆ ನಾವು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಬರಗುಂಡಿ, ಪೂಜಾ ಶಿಂಘೆ, ಶೇಖಣ್ಣ ಕವಳಿಕಾಯಿ, ಬಸವರಾಜ ಪೂಜಾರ, ಶಿವು ತಮ್ಮಣ್ಣನವರ, ಶರಿಪ ಬಿಳೆಯಲಿ, ಮುತ್ತು ಬಳಿಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.