ಶಿಗ್ಗಾಂವಿ: ವ್ಯವಸಾಯದಲ್ಲಿ ಯೂರಿಯಾ ಗೊಬ್ಬರದ ವಿಪರೀತ ಬಳಕೆ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ಹಾನಿ ಉಂಟು ಮಾಡುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಆರ್. ದಾವಣಗೆರೆ ತಿಳಿಸಿದರು.
ತಾಲೂಕಿನ ದುಂಡಶಿ ರೈತ ಸಂಪರ್ಕ ಕೇಂದ್ರದಲ್ಲಿ ನ್ಯಾನೋ ಯೂರಿಯ ಬಳಕೆ ಹಾಗೂ ಬೆಳೆವಿಮೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯೂರಿಯಾ ಭೂಮಿಯ ಅಂತರ್ಜಲಕ್ಕೆ ಹೋಗಿ ಕುಡಿಯುವ ನೀರಿನ ಮೂಲಗಳನ್ನು ಮಲಿನಗೊಳಿಸಲಿದೆ. ಅತಿಯಾದ ಸಾರಜನಕ ಬಳಕೆ ಸಸ್ಯಗಳನ್ನು ಕೆಲವು ಕೀಟಗಳು ಮತ್ತು ರೋಗಗಳಿಗೆ ಹೆಚ್ಚು ಪೂರಕವಾಗುತ್ತದೆ ಎಂದರು.ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ಅಧಿಕಾರಿ ರಾಜು ಜಂಗ್ಲೆಪ್ಪನವರ ಮಾತನಾಡಿ, ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ಜಿಪಿಎಸ್ ಮೂಲಕ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.
ನ್ಯಾನೋ ಯೂರಿಯಾ ಒಂದು ದ್ರವರೂಪದ ರಸಗೊಬ್ಬರ. ಇದನ್ನು ಇಪ್ಕೋ ಕಂಪನಿಯು ಅಭಿವೃದ್ಧಿಪಡಿಸಿದೆ. ಯೂರಿಯಾ ಗೊಬ್ಬರಕ್ಕಿಂತ ಎಂಟರಿಂದ ಹತ್ತು ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ ಎಂದರು.ರೈತರಾದ ಗೌಸುಸಾಬ್ ತೋಟದ, ಸಹದೇವ ಅಗಡಿ, ಈರಣ್ಣ ಬಾರ್ಕಿ, ಮಹಾವೀರ ಹಾವೇರಿ, ಮಾದೇವಪ್ಪ ಬನ್ನೂರ, ಕೃಷಿ ಇಲಾಖೆ ಸಿಬ್ಬಂದಿ ಮಂಜುನಾಥ ಧರಣೆಪ್ಪನವರ ಇದ್ದರು.45ನೇ ರೈತ ಹುತಾತ್ಮ ದಿನಾಚರಣೆ ಇಂದು
ಹಾನಗಲ್ಲ: ನರಗುಂದ- ನವಲಗುಂದ ರೈತ ಹೋರಾಟದಲ್ಲಿ ಮಡಿದ ರೈತ ಹುತಾತ್ಮರ ನೆನಪಿಗಾಗಿ 45ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ರೈತ ಸಂಘದ ಜಿಲ್ಲಾ ಸಮಿತಿ ಸಹಯೋಗದಲ್ಲಿ ತಾಲೂಕು ಘಟಕ ಪಟ್ಟಣದ ವಿರಕ್ತಮಠದ ಆವರಣದಲ್ಲಿರುವ ಸದಾಶಿವ ಮಂಗಲ ಭವನದಲ್ಲಿ ಜು. 21ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.ಈ ಕುರಿತು ಪ್ರಕಟಣೆ ನೀಡಿರುವ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ಆಚರಿಸಲ್ಪಡುವ ರೈತ ಹುತಾತ್ಮ ದಿನವನ್ನು ಪ್ರಸಕ್ತ ವರ್ಷ ಹಾನಗಲ್ಲಿನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ವಹಿಸಲಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಹಾಗೂ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಮತ್ತು ಪದಾಧಿಕಾರಿಗಳಾದ ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮಮ್ಹದ್‌ಗೌಸ್ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈತರು ಪಾಲ್ಗೊಳ್ಳಲಿದ್ದಾರೆ.