ಜು.೧೯ಕ್ಕೆ ಸೌರಶಕ್ತಿ ಸ್ವ-ಉದ್ಯೋಗ ಮೇಳ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Jul 17, 2025, 12:34 AM IST
೧೬ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. | Kannada Prabha

ಸಾರಾಂಶ

ಸ್ವ-ಸಹಾಯ ಸಂಘಗಳು ಹಾಗೂ ಗುಂಪುಗಳನ್ನು ಒಂದೆಡೆ ಸೇರಿಸಿ ಸ್ತ್ರೀ ಸಬಲೀಕರಣದ ಮೂಲಕ ಹೊಸ ಸಾಧ್ಯತೆಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವ-ಉದ್ಯೋಗ ರೂಪಿಸಿಕೊಳ್ಳಲು ಸೌರವಿದ್ಯುತ್ ಆಧಾರಿತ ಯಂತ್ರಗಳ ಮೂಲಕ ಉತ್ಪನ್ನಗಳನ್ನು ತಯಾರಿಸಿ ಹವಾಮಾನ ಸ್ನೇಹಿ ಜೀವನೋಪಾಯ ಪರಿಹಾರಗಳ ಮೂಲಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಸೆಲ್ಕೊ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ‘ಸೌರಶಕ್ತಿ-ಸ್ವ ಉದ್ಯೋಗ ಮೇಳ’ವನ್ನು ಜು.೧೯ರ ಬೆಳಗ್ಗೆ ೧೦.೩೦ಕ್ಕೆ ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ರಾಷ್ಟ್ರದ ಜಿಡಿಪಿಗೆ ಕೃಷಿ ಕೇಂದ್ರ ಶೇ.೪೫ ರಷ್ಟು ಕೊಡುಗೆ ನೀಡುತ್ತಿದ್ದು, ಕೃಷಿಯಲ್ಲಿ ಶೇ.೬೦ರಷ್ಟು ಮಹಿಳೆಯರೇ ತೊಡಗಿದ್ದಾರೆ. ಕೃಷಿ ಜೊತೆಗೆ ಬಿಡುವಿನ ವೇಳೆಯಲ್ಲಿ ಸ್ವ ಉದ್ಯೋಗ ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೋತ್ಸಾಹಿಸುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವ-ಸಹಾಯ ಸಂಘಗಳು ಹಾಗೂ ಗುಂಪುಗಳನ್ನು ಒಂದೆಡೆ ಸೇರಿಸಿ ಸ್ತ್ರೀ ಸಬಲೀಕರಣದ ಮೂಲಕ ಹೊಸ ಸಾಧ್ಯತೆಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವ-ಉದ್ಯೋಗ ರೂಪಿಸಿಕೊಳ್ಳಲು ಸೌರವಿದ್ಯುತ್ ಆಧಾರಿತ ಯಂತ್ರಗಳ ಮೂಲಕ ಉತ್ಪನ್ನಗಳನ್ನು ತಯಾರಿಸಿ ಹವಾಮಾನ ಸ್ನೇಹಿ ಜೀವನೋಪಾಯ ಪರಿಹಾರಗಳ ಮೂಲಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಎಂಆರ್‌ಎಲ್‌ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗವಿದ್ದು, ಸಂವಾದ, ಯಂತ್ರಗಳ ಪ್ರ್ರಾತ್ಯಕ್ಷತೆ, ಮಾದರಿ ಪ್ರಯೋಗಗಳ ಪ್ರದರ್ಶನ ನೀಡಲು ೧೬ ಮಳಿಗೆಗಳನ್ನು ರೂಪಿಸಲಾಗಿದೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ, ಸೆಲ್ಕೋ ಫೌಂಡೇಷನ್ ನಿರ್ದೇಶಕಿ ಹುದಾ ಜಾಫರ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ತೋಗಾರಿಕೆ ಇಖಾಖೆ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಸ್.ರಾಜಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸೆಲ್ಕೋ ಫೌಂಡೇಶನ್ನ ಪ್ರಕಾಶ್ ಮೇತಿ ಮಾತನಾಡಿ, ಈಗಾಗಲೇ ಉತ್ತರ ಕರ್ನಾಟಕದ ೧೬ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಮೂಲಕ ಕೃಷಿಯಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಸ್ವ ಉದ್ಯೋಗ ರೂಪಿಸಿಕೊಡಲಾಗಿದೆ. ಸ್ವ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಮಹಿಳೆಯರಿಗೆ ಯಂತ್ರಗಳ ಅಳವಡಿಕೆ, ಬಳಕೆಗೆ ಸಂಸ್ಥೆಯಿಂದ ನೆರವು ನೀಡಲಾಗುವುದು. ಹಣಕಾಸಿನ ವಿಷಯವಾಗಿ ಕೇಂದ್ರ ಸರ್ಕಾರದಿಂದ ಶೇ.೩೫ರಷ್ಟು, ರಾಜ್ಯ ಸರ್ಕಾರದಿಂದ ಶೇ.೧೫ರಷ್ಟು ಸೇರಿ ಒಟ್ಟು ಶೇ.೫೦ರಷ್ಟು ಸೌರ ವಿದ್ಯುತ್ ಸೌಲಭ್ಯಕ್ಕೆ ಸಬ್ಸಿಡಿ ದೊರೆಯಲಿದೆ. ಕಾರ್ಯಕ್ರಮದಲ್ಲಿ ೮೦೦ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಸೌರಶಕ್ತಿ ಅಳವಡಿಕೆ ಹಾಗೂ ಯಂತ್ರಗಳ ಕುರಿತು ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ರಂಜಿತ್ ಉಪಸ್ಥಿತರಿದ್ದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು