ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಅವರು ಕರ್ತವ್ಯದ ಸ್ಥಳಕ್ಕೆ ಹೊರಡುವುದಕ್ಕೂ ಮೊದಲು ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ, ಗ್ರಾಮಸ್ಥರು ಅವರಿಗೆ ಸಿಂದೂರ ತಿಲಕ ಇಟ್ಟು ಬೀಳ್ಕೊಟ್ಟರು. ವಾಹನಕ್ಕೆ ತ್ರಿವರ್ಣ ಧ್ವಜ ಕಟ್ಟಿಕೊಂಡು ಹೊರಟ ಯೋಧನಿಗೆ ಇಂಡಿ ಪೊಲೀಸರು ಎಸ್ಕಾರ್ಟ್ ನೀಡಿದರು. ಇದೇ ವೇಳೆ, ರಾಜಸ್ಥಾನದ ಜೈಸಲ್ಮೇರ್‌ಗೆ ಕರ್ತವ್ಯಕ್ಕಾಗಿ ಹೊರಟ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದ ಬಸವಂತಪ್ಪ ರುದ್ರಪ್ಪ ಕಲ್ಲಿಗೆ ಮನೆಯವರು ಆರತಿ ಬೆಳಗಿ, ಗೆದ್ದು ಬನ್ನಿ ಎಂದು ಶುಭ ಹಾರೈಸಿದರು. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಧುತ್ತರಗಾಂವ ನಿವಾಸಿ, ಹಣಮಂತರಾಯ ಚೌಸೆ ಅವರ ಪತ್ನಿ ಸ್ನೇಹಾಳು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದು, ಪತ್ನಿಗೆ ಧೈರ್ಯ ತುಂಬಿ ಕರ್ತವ್ಯಕ್ಕೆ ಕಳಿಸಿಕೊಟ್ಟರು.
ಆಳಂದ ತಾಲೂಕಿನ ಯಳಸಂಗಿ ಗ್ರಾಮದ ನಿವಾಸಿ, ಬಿಎಸ್‍ಎಫ್ ಯೋಧ, ಸಂಜಯ ಅಕ್ಕಲಕೋಟೆ ಅವರಿಗೆ ಆಳಂದ ಪಟ್ಟಣದಲ್ಲಿ ನಿವೃತ್ತ ಸೈನಿಕರ ಸಂಘದಿಂದ ಗೌರವಿಸಿ, ಶುಭ ಕೋರಿ ಬೀಳ್ಕೊಡಲಾಯಿತು. ಇದೇ ವೇಳೆ, ತಾಲೂಕಿನ ಬಂಗರಗಾದ ಶ್ರೀಶೈಲ ಜಮಾದಾರ, ಮಾದನ ಹಿಪ್ಪರಗಾದ ರಾಮಚಂದ್ರ ಬಾನುದಾಸ್ ಫುಲಾರೆ, ಮಲ್ಲಿಕಾರ್ಜುನ ತೂಳನೂರೆ, ತಂಬಾಕವಾಡಿ ಗ್ರಾಮದ ರಾಜಶೇಖರ ವಳವಂಡವಾಡಿ, ಕಡಗಂಚಿಯ ವಿಶ್ವನಾಥ ಚಿಂಚನೂರ, ಸಾವಳೇಶ್ವರದ ಮಲ್ಲಿಕಾರ್ಜುನ ಘೋಡಕೆ, ಧನರಾಜ ಮೂಲಗೆ ಕೂಡ ಕರ್ತವ್ಯಕ್ಕೆ ಮರಳಿದರು.ಚಿತ್ರ ಶೀರ್ಷಿಕೆ:ದುತ್ತರಗಾಂವ್ 1 ಆಳಂದ: ಧುತ್ತರಗಾಂವ ನಿವಾಸಿ ಯೋಧ ಹಣಮಂತರಾಯ ಚೌಸೆ.