ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು, ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15ರಿಂದ 20 ದಿನಗಳಲ್ಲಿ ಮೆಕ್ಕೆಜೋಳ ಬೆಳೆ ಮೊಳಕೆಯೊಡೆದು ಸಸಿಯಾಗುವುದು. ಈ ಹಿನ್ನೆಲೆ ಕೆಲ ರೈತರ ತಾಕುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಬೆಳೆ ಗುಣಮಟ್ಟ ಪರಿಶೀಲಿಸಿದರು.
- ಕೃಷಿ ಇಲಾಖೆ ಸಲಹೆ, ಸೂಚನೆಗಳಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು: ಜಂಟಿ ನಿರ್ದೇಶಕರ ಸಲಹೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು, ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15ರಿಂದ 20 ದಿನಗಳಲ್ಲಿ ಮೆಕ್ಕೆಜೋಳ ಬೆಳೆ ಮೊಳಕೆಯೊಡೆದು ಸಸಿಯಾಗುವುದು. ಈ ಹಿನ್ನೆಲೆ ಕೆಲ ರೈತರ ತಾಕುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಬೆಳೆ ಗುಣಮಟ್ಟ ಪರಿಶೀಲಿಸಿದರು.
ಮೆಕ್ಕೆಜೋಳ ಬೆಳೆ ಪರಿಶೀಲಿಸಿದಾಗ ಕೆಲವೆಡೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ. ಬೆಳೆದ ಹುಳುವಿನ ಕಪ್ಪು ತಲೆಯ ಮುಂಭಾಗದಲ್ಲಿ ತಲೆಕೆಳಗಾದ ''ವೈ'' ಆಕೃತಿಯ ಗುರುತು ಹಾಗೂ ಹುಳದ ಹಿಂಭಾಗದಲ್ಲಿ 4 ದಟ್ಟವಾದ ಕಂದುಬಣ್ಣದ ಚುಕ್ಕೆಗಳು ಚೌಕಾಕಾರದಲ್ಲಿ ಕಂಡುಬರುತ್ತವೆ. ಹುಳುಗಳು ಎಲೆಗಳನ್ನು ಕೆರೆದು ತಿನ್ನುವುದರಿಂದ ನೀಳ, ಚಿಂದಿಯಂತಾದ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಎಲೆಸುಳಿ ತಿಂದು ಹಾಳುಮಾಡುತ್ತವೆ. ಆ ಸುಳಿಯಲ್ಲಿ ತೇವದಿಂದ ಕೂಡಿದ ಕಂದು ಬಣ್ಣದ ಹಿಕ್ಕೆಗಳನ್ನು ಕಾಣಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಲದ್ದಿಹುಳು ಹತೋಟಿ ಕ್ರಮಗಳು:
ಲದ್ದಿಹುಳು ಕಂಡುಬಂದ ಕಡೆಗಳಲ್ಲಿ ರೈತರು ಕೃಷಿ ಇಲಾಖೆ ಸೂಚಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಸುಕಿನ ಜೋಳದ ಜೊತೆ ತೊಗರಿಯನ್ನು ಮಿಶ್ರಬೆಳೆಯಾಗಿ ಬಿತ್ತಬೇಕು. ಸಮತೋಲನ ರಾಸಾಯನಿಕ ಗೊಬ್ಬರ ಬಳಸಬೇಕು. ಮೊಟ್ಟೆಗಳ ಗುಂಪು ಹಾಗೂ ಮೊದಲ ಹಂತದ ಮರಿಗಳಿರುವ ಎಲೆಗಳನ್ನು ಕಿತ್ತು ನಾಶಪಡಿಸಬೇಕು. ಪ್ರತಿ ಎಕರೆಗೆ 30 ಪಕ್ಷಿ ಸೂಚಿಗಳನ್ನು ನೆಡಬೇಕು. 30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 15ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ತತ್ತಿಗಳ ಪರತಂತ್ರ ಜೀವಿಯಾದ ಟ್ರೈಕೊಗ್ರಾಮ ಪ್ರೀಟಿಯೋಸಮ್ ಪ್ರತಿ ಎಕರೆಗೆ 50,000ದಂತೆ (3 ಟ್ರೈಕೋಕಾರ್ಡ್) ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡಬೇಕು. ಮೆಟರೈಜೀಂ ಅನಿಸೋಪ್ಲಿಯೆ (1್ಠ108 ಸಿಎಫ್‌ಯು/ಗ್ರಾಂ) 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯಾ ರಿಲೈ (108 ಸಿಎಫ್‌ಯು/ಗ್ರಾಂ) ಅನ್ನು 3 ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪರಣೆ ಮಾಡಬೇಕು.
ಲದ್ದಿ ಹುಳುವಿನಿಂದ ಶೇ.20ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ ಶೇ.5 ಎಸ್.ಜಿ ಅನ್ನು 0.4 ಗ್ರಾಂ.ನಂತೆ ಅಥವಾ ಸ್ಪೈನೋಸಾಡ್ 45 ಎಸ್.ಸಿ. ಅನ್ನು 0.3 ಮಿ.ಲೀ. ಅಥವಾ ಥೈಯೋಡಿಕಾರ್ಬನ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಹಾಗೂ ಪ್ರತಿ ಸಿಂಪರಣೆಯನ್ನು ಮುಂಜಾನೆ/ ಸಂಜೆ ಕೈಗೊಳ್ಳಬೇಕು.
ವಿಷಪ್ರಾಶನ ಬಳಕೆ:
10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿತೌಡಿಗೆ 1 ಕೆ.ಜಿ. ಬೆಲ್ಲ ಹಾಗೂ ಸ್ವಲ್ಪ ನೀರನ್ನು ಬೆರೆಸಿಟ್ಟು, ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ್ (ಪ್ರತಿ ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿತೌಡಿಗೆ 10 ಗ್ರಾಂ. ನಂತೆ) ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಉದುರಿಸಬೇಕು.
ವಿಶೇಷ ಸೂಚನೆ:
ಕೀಟನಾಶಕವನ್ನು ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು. ಕೀಟನಾಶಕ ಸಿಂಪರಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಬಳಸಿ, ಸಿಂಪರಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗೆ ಮತ್ತು ಕೀಟನಾಶಕಗಳಿಗಾಗಿ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.