ಕಾರವಾರ: ನಗರದಲ್ಲಿ ಮಳೆಗಾಲದ ಪೂರ್ವ ಚರಂಡಿ ಸ್ವಚ್ಛತೆ ನಡೆದಿದ್ದು, ಆದರೆ ಕೆಲವು ಕಡೆ ತ್ಯಾಜ್ಯಗಳನ್ನು ತೆರವು ಮಾಡಿದ ಜಾಗದಲ್ಲೇ ಪುನಃ ಘನತ್ಯಾಜ್ಯ ಎಸೆಯಲಾಗಿದೆ.
ಪ್ರಸಕ್ತ ವರ್ಷ ೧ರಿಂದ ೧೫ ಹಾಗೂ ೧೬ರಿಂದ ೩೧ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಪ್ರತ್ಯೇಕ ಗುತ್ತಿಗೆ ನೀಡಿ ಮಾಡಿಸಲಾಗುತ್ತಿದ್ದು, ಪುನಃ ಕಸ ಬಿಸಾಡುತ್ತಿರುವುದರಿಂದ ಹೂಳು, ಮಣ್ಣು, ಘನತ್ಯಾಜ್ಯಗಳನ್ನು ತೆಗೆದರೂ ಪ್ರಯೋಜನವಿಲ್ಲದಂತಾಗಿದೆ. ಈ ಘನತ್ಯಾಜ್ಯಗಳಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದೇ ರಸ್ತೆ ಮೇಲೆ, ಮನೆಗಳಿಗೆ ನುಗ್ಗುವಂತಾಗಿ ಪ್ರತಿವರ್ಷ ನಗರದ ಬಹುತೇಕ ಕಡೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಗಾಳಿಯ ವೇಗಕ್ಕೆ ಪ್ಲಾಸ್ಟಿಕ್ ಕವರ್‌ಗಳು ಹಾರಿಹೋಗಿ ಖಾಲಿ ಇರುವ ನಿವೇಶನಗಳಲ್ಲಿ ಕೂಡಾ ಬೀಳುತ್ತಿವೆ. ಕವರ್‌ಗಳಲ್ಲಿ ತಿಂಡಿತಿನಿಸು ಇದ್ದರೆ ಅದರ ವಾಸನೆಗೆ ಚಾನುವಾರುಗಳ ಕವರ್ ಸಹಿತ ತಿಂದ ಉದಾಹರಣೆಗಳಿವೆ.
ಬಹುತೇಕ ಕಡೆ ಕಾಯಂ ತ್ಯಾಜ್ಯ ಬಿಸಾಡುವ ಜಾಗಗಳೇ ಇದ್ದು, ಇಂತಹ ಕಡೆ ನಿಗಾ ಇಟ್ಟು ಕಸ ಎಸೆಯುವವರ ವಿರುದ್ಧ ನಗರಸಭೆ ಅಧಿಕಾರಿಗಳು ಕಠಿಣ ಕ್ರಮ ವಹಿಸಬೇಕಿದೆ. ಸಾರ್ವಜನಿಕರೂ ಮನೆ ಮನೆಗೆ ಕಸ ಸಂಗ್ರಹಣೆಗೆ ಬರುವ ವಾಹನಕ್ಕೆ ತ್ಯಾಜ್ಯವನ್ನು ನೀಡಿ ನಗರದವನ್ನು ಸ್ವಚ್ಛವಾಗಿಡಲು ಸಹಕರಿಸುವುದರ ಜತೆಗೆ ಕೃತಕ ನೆರೆ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.