ತೋಟಕ್ಕೆ ಹಬ್ಬಿದ ಘನತ್ಯಾಜ್ಯ ಬೆಂಕಿ, ಅಪಾರ ಹಾನಿ

KannadaprabhaNewsNetwork |  
Published : Apr 02, 2025, 01:01 AM IST
೧ ಜೆಎಲ್ಆರ್ಚಿತ್ರ೧: ಜಗಳೂರು ಪಟ್ಟಣದ ಹೊರವಲಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಬೆಂಕಿಯಿಂದಾಗಿ ಪಕ್ಕದ  ಸರ್ವೆ ನಂ ೧೬೪/೧ರಲ್ಲಿ ಅಡಕೆ, ಬಾಳೆ ಗಿಡಗಳು ಸುಟ್ಟು ಹೋಗಿರುವ ಚಿತ್ರ | Kannada Prabha

ಸಾರಾಂಶ

ಪಟ್ಟಣದ ಕೊಟ್ಟೂರು ರಸ್ತೆಯ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ ಬೆಂಕಿಯು ಚಂದೋಡಿ ಲೀಲಾ ನಾಟಕ ಕಂಪನಿ ಮಾಲೀಕ ಶಂಭುಲಿಂಗಪ್ಪ ಅವರ ಅಳಿಯ ಜೆ.ಎಸ್. ಪ್ರಶಾಂತ್ ಕುಮಾರ್ ಅವರಿಗೆ ಸೇರಿದ ಜಮೀನಿಗೆ ತಗುಲಿ, ಸುಮಾರು ೩೦೦ ಅಡಕೆ, ೩೦೦ ಬಾಳೆ ಗಿಡಗಳು, ಲ್ಯಾಟರಲ್ ಪೈಪ್‌ಗಳು, ಸ್ಪ್ಲಿಂಕ್ಲರ್ ಪೈಪ್‌ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

- ಅಡಕೆ, ಬಾಳೆ ಬೆಳೆ, ಪೈಪುಗಳು ಭಸ್ಮ । ಪರಿಹಾರಕ್ಕೆ ಮಾಲೀಕರ ಒತ್ತಾಯ - - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಕೊಟ್ಟೂರು ರಸ್ತೆಯ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ ಬೆಂಕಿಯು ಚಂದೋಡಿ ಲೀಲಾ ನಾಟಕ ಕಂಪನಿ ಮಾಲೀಕ ಶಂಭುಲಿಂಗಪ್ಪ ಅವರ ಅಳಿಯ ಜೆ.ಎಸ್. ಪ್ರಶಾಂತ್ ಕುಮಾರ್ ಅವರಿಗೆ ಸೇರಿದ ಜಮೀನಿಗೆ ತಗುಲಿ, ಸುಮಾರು ೩೦೦ ಅಡಕೆ, ೩೦೦ ಬಾಳೆ ಗಿಡಗಳು, ಲ್ಯಾಟರಲ್ ಪೈಪ್‌ಗಳು, ಸ್ಪ್ಲಿಂಕ್ಲರ್ ಪೈಪ್‌ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಭಾನುವಾರ ಸಂಜೆ ೪ ಗಂಟೆ ಸುಮಾರಿಗೆ ತೋಟಕ್ಕೆ ಬೆಂಕಿ ಬಿದ್ದಿದೆ. ಪ್ಲಾಸ್ಟಿಕ್‌, ರಸ್ತೆ ಬದಿ ಕಸ, ಹಸಿಕಸ, ಒಣಕಸ ವಿಂಗಡಿಸುವ ಕಸ ಸಂಸ್ಕರಣ ಮತ್ತು ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಹೊತ್ತಿಕೊಂಡ ಬೆಂಕಿಯ ಕಿಡಿಗಳು ತೋಟಕ್ಕೂ ತಾಗಿ, ಎರಡು ವರ್ಷದ ಅಡಕೆ, ಬಾಳೆ ಫಸಲು ನಾಶವಾಗಿವೆ.

ಕಾಂಪೌಂಡ್‌ ಇದ್ದರೂ ಬೆಂಕಿಯ ಕಿಡಿಗಳು ಗಾಳಿ ಮೂಲಕ ಒಳಹುಲ್ಲಿನ ಕಿರಿದಾದ ಬೆಟ್ಟಕ್ಕೆ ತಾಗಿ ಉರುದಿದೆ. ಅನಂತರ ಪ್ರಶಾಂತ ಕುಮಾರ್ ಅವರ ತೋಟಕ್ಕೆ ಬೆಂಕಿ ಹರಡಿದೆ. ರೈತರು ಯುಗಾದಿ ಸಂಭ್ರಮದಲ್ಲಿದ್ದರಿಂದ ಬೆಂಕಿ ವ್ಯಾಪಿಸುತ್ತಿರುವುದು ಗಮನಿಸಿಲ್ಲ. ಕೆಲವರು ಹೊಗೆ, ಬೆಂಕಿಯ ಜ್ವಾಲೆ ವೀಕ್ಷಿಸಿ, ಪಕ್ಕದ ಜಮೀನಿನ ರೈತ ಪ್ರಶಾಂತ ಕುಮಾರ್ ಗಮನಕ್ಕೆ ತಂದಾಗಲೇ ತೋಟಕ್ಕೆ ಬೆಂಕಿ ಹಬ್ಬಿರುವುದು ಗೊತ್ತಾಗಿದೆ. ತಕ್ಷಣ ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.

ಬೆಂಕಿ ನಂದಿಸುವ ವಾಹನಗಳು ಸ್ಥಳಕ್ಕೆ ಬರುವಷ್ಟರಲ್ಲಿ ಅಡಕೆ, ಬಾಳೆ ಗಿಡಗಳು ಸುಟ್ಟುಹೋಗಿದ್ದವು. ಘಟನೆಯಲ್ಲಿ ಲ್ಯಾಟರಲ್ ಪೈಪ್‌ಗಳು, ಸ್ಪ್ಲಿಂಕ್ಲರ್ ಪೈಪ್‌ಗಳು ಸಹ ಸಂಪೂರ್ಣ ಸುಟ್ಟುಹೋಗಿವೆ.

ವರದಿಗೆ ಶಾಸಕ ಸೂಚನೆ:

ತೋಟ ಸುಟ್ಟಿರುವ ವಿಚಾರವನ್ನು ಮಾಲೀಕ ಪ್ರಶಾಂತ ಕುಮಾರ್ ಅವರು ಶಾಸಕ ಬಿ.ದೇವೇಂದ್ರಪ್ಪ ಗಮನಕ್ಕೆ ತಂದಿದ್ದರು. ಪ.ಪಂ. ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಅವರಿಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ಪಾರದರ್ಶಕ ವರದಿ ನೀಡುವಂತೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದ್ದರು. ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಲೋಕ್ಯಾನಾಯ್ಕ್, ಮಾಲೀಕ ಪ್ರಶಾಂತ ಕುಮಾರ್ ಮತ್ತು ಸುತ್ತಮುತ್ತಲ ರೈತರು ಬೆಂಕಿ ತಾಗಲು ಕಾರಣವೇನು ಎಂಬ ಬಗ್ಗೆ ಪರಿಶೀಲಿಸಿದರು.

ಜಮೀನಿನಲ್ಲಿ ೩೦೦ ಅಡಕೆ, 300 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ. ಇದಕ್ಕೆ ಕಾರಣ ಪ.ಪಂ. ಘನ ತ್ಯಾಜ್ಯ ನಿರ್ವಹಣೆಯ ಲೋಪವಾಗಿದೆ. ಪ.ಪಂ. ಅಧಿಕಾರಿಗಳು ಮತ್ತು ಸರ್ಕಾರ ನಷ್ಟ ಭರಿಸಿಕೊಡಬೇಕು. ಕಟ್ಟಡದ ಕಾಂಪೌಂಡನ್ನು ಇನ್ನಷ್ಟು ಎತ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ತೋಟದ ಮಾಲೀಕರಾದ ಪ್ರಶಾಂತ ಕುಮಾರ್ ಮತ್ತು ಶಂಭುಲಿಂಗಪ್ಪ ಮನವಿ ಮಾಡಿದರು.

- - -

(ಕೋಟ್‌) ಮೇಲ್ನೋಟಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ್ದ ಬೆಂಕಿಯು ತೋಟಕ್ಕೂ ತಗುಲಿದೆ ಎಂದು ಕಾಣುತ್ತಿದೆ. ಕಾನೂನು ಅನುಸಾರ ನಷ್ಟ ಭರಿಸಲು ಶಾಸಕ ಬಿ.ದೇವೇಂದ್ರಪ್ಪ ಮತ್ತು ಉನ್ನತ ಅಧಿಕಾರಿಗಳಿಗೆ ಗಮನಕ್ಕೆ ತರುತ್ತೇನೆ

- ಸಿ.ಲೋಕ್ಯಾನಾಯ್ಕ್, ಚೀಫ್ ಆಫೀಸರ್, ಪ.ಪಂ. - - -

-೧ಜೆಎಲ್ಆರ್ಚಿತ್ರ೧:

ಜಗಳೂರು ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದ ಬೆಂಕಿಯಿಂದಾಗಿ ಪಕ್ಕದ ಜಮೀನಿಗೂ ಬೆಂಕಿ ಹರಡಿ ಅಡಕೆ, ಬಾಳೆ ಗಿಡಗಳು ಸುಟ್ಟುಹೋಗಿ ಅಪಾರ ನಷ್ಟ ಸಂಭವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ