ನಾಲ್ಕೈದು ತಿಂಗಳಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ

KannadaprabhaNewsNetwork |  
Published : Sep 13, 2025, 02:04 AM IST
12ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಸ್ವತ್ತಿನ ಮಾಲೀಕರಿಗೆ  ಇ-ಖಾತಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ನಗರದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿಗೆ ಗುರುತಿಸಿದ್ದ ಜಾಗಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಕಸ ವಿಲೇವಾರಿ ಸಮಸ್ಯೆ ಉಲ್ಬಣವಾಗಿದ್ದು, ನಾಲ್ಕೈದು ತಿಂಗಳಲ್ಲಿ ಪರಿಹಾರ ದೊರಕಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ನಗರದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿಗೆ ಗುರುತಿಸಿದ್ದ ಜಾಗಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಕಸ ವಿಲೇವಾರಿ ಸಮಸ್ಯೆ ಉಲ್ಬಣವಾಗಿದ್ದು, ನಾಲ್ಕೈದು ತಿಂಗಳಲ್ಲಿ ಪರಿಹಾರ ದೊರಕಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಸ್ವತ್ತಿನ ಮಾಲೀಕರಿಗೆ ಇ-ಖಾತಾ ಪ್ರಮಾಣ ಪತ್ರಗಳನ್ನು ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹೊರವಲಯದಲ್ಲಿ ಕೆಲವು ಜಮೀನು ಮಾಲೀಕರು ತ್ಯಾಜ್ಯ ವಿಲೇವಾರಿಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಅಲ್ಲಿಯೂ ಸ್ಥಳೀಯರ ವಿರೋಧ ಎದುರಾಗುತ್ತಿದೆ. ಆದ್ದರಿಂದ ನಾಗರೀಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು, ಇ-ಖಾತೆ ಮಾಡಿಸಿಕೊಳ್ಳಲು ಈಗಾಗಲೆ ನಗರಸಭೆ ಸಾಕಷ್ಟು ಅರಿವು ಮೂಡಿಸಿದೆ. ವಾರ್ಡ್ ವಾರು ಅಭಿಯಾನಗಳು ನಿರಂತರವಾಗಿ ನಡೆಯುತ್ತಿವೆ. ಸುಮಾರು 5 ಸಾವಿರ ಇ-ಖಾತೆಗಳನ್ನು ಇಲ್ಲಿಯವರೆಗೆ ವಿತರಣೆಯಾಗಿದೆ. ಆದರೆ ಕಳೆದ 25 ದಿನಗಳಿಂದ ಸರ್ವರ್ ಸಮಸ್ಯೆ, ನಿರಂತರ ರಜೆಗಳು ಇದ್ದ ಕಾರಣ ಖಾತೆ ವಿತರಣೆ ವಿಳಂಬವಾಗುತ್ತಿದೆ ಎಂದರು.

ಇ-ಖಾತೆಗಳಿಗೆ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆಯಾಗುತ್ತಿವೆ. ಕಾರ್ಯದೊತ್ತಡವೂ ಹೆಚ್ಚಾಗಿದೆ. ರಜಾ ದಿನಗಳಲ್ಲಿಯೂ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹಾಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂಪೂರ್ಣ ವಿಲೇವಾರಿ ಮಾಡಿ ನಂತರ ಮನೆ ಮನೆ ಇ-ಖಾತೆ ಅಭಿಯಾನ ಪುನಾರಂಭವಾಗಲಿದೆ. ಯಾರಬ್ ನಗರ, ಕೊತ್ತೀಪುರ, ಬಾಲಗೇರಿ ಬಡಾವಣೆಗಳಲ್ಲಿ ಶೀಘ್ರದಲ್ಲೆ ಅಭಿಯಾನವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿ ಖಾತೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿತ್ತು. ನಂತರ ಕೆಲ ದಿನ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬಿ ಖಾತೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಗರಸಭೆ ವ್ಯಾಪ್ತಿಯಲ್ಲಿ ಇನ್ನೂ 3 ರಿಂದ 4 ಸಾವಿರ ಬಿ ಖಾತೆ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಖಾತೆಗಳ ವಿಚಾರದಲ್ಲಿ ಅಥವಾ ನಗರಸಭೆಯ ಯಾವುದೇ ಕಾರ್ಯಕ್ಕೆ ನಾಗರೀಕರು ದಲ್ಲಾಳಿಗಳ ಮೊರೆ ಹೋಗಬೇಡಿ. ಅಧಿಕಾರಿಗಳಿಂದ ಮಾಹಿತಿ ಪಡೆದು ಸರಿಯಾಗಿ ಅರ್ಜಿ ಸಲ್ಲಿಸಿ. ಯಾವುದೇ ಸಮಸ್ಯೆ ಇದ್ದರೂ ಆಯುಕ್ತರು ಹಾಗೂ ನಮ್ಮನ್ನು ನೇವಾಗಿ ಭೇಟಿ ಮಾಡಿ ಎಂದು ಕೆ.ಶೇಷಾದ್ರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತರಾದ ಡಾ.ಜಯಣ್ಣ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಸೋಮಶೇಖರ್ ಮಣಿ, ಅಜ್ಮತ್, ಆರೀಫ್, ನಿಜಾಮುದ್ದೀನ್ ಷರೀಫ್, ನರಸಿಂಹ, ಗೋವಿಂದರಾಜು, ಆರ್ ಒ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

12ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಸ್ವತ್ತಿನ ಮಾಲೀಕರಿಗೆ ಇ-ಖಾತಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ